ಅದ್ನಾನ್ ಸಮಿ, ಭಾರತ ಬಿಟ್ಟು ಹೊರಡಿ ಸ್ವಾಮಿ!
ಮುಂಬೈ, ಅ.15:: ಪಾಕಿಸ್ತಾನದ ಪಾಪ್ ಗಾಯಕ ಅದ್ನಾನ್ ಸಮಿ ಅವರಿಗೆ ದೇಶ ಬಿಟ್ಟು ತೆರಳುವಂತೆ ಮುಂಬೈ ಪೊಲೀಸರು ಮಂಗಳವಾರ ನೋಟಿಸ್ ಜಾರಿ ಮಾಡಿದ್ದಾರೆ. ಅದ್ನಾನ್ ಸಮಿ ಪಡೆದಿದ್ದ ವೀಸಾ ಅವಧಿ ಅಕ್ಟೋಬರ್ 6, 2013ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಈ ನೋಟಿಸ್ ಜಾರಿ ಮಾಡಿದ್ದಾರೆ.
ಅದ್ನಾನ್ ಸಮಿ ಅವರ ವೀಸಾ ಅವಧಿ ಸೆ.26, 2012ರಿಂದ ಅಕ್ಟೋಬರ್ 6,2013ರ ತನಕ ಇತ್ತು. ವೀಸಾ ಅವಧಿ ವಿಸ್ತರಣೆಗಾಗಿ ದೆಹಲಿಯಲ್ಲಿ ಅದ್ನಾನ್ ಸಮಿ ಅರ್ಜಿ ಸಲ್ಲಿಸಿದ್ದರು. ಆದರೆ, ಯಾವುದೇ ಸೂಕ್ತ ದಾಖಲಾತಿ ಒದಗಿಸುವಲ್ಲಿ ವಿಫಲರಾಗಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರು ನೀಡಿರುವ ನೋಟಿಸ್ ಗೆ ಉತ್ತರ ನೀಡಲು 7 ದಿನಗಳ ಕಾಲ ಅವಕಾಶ ನೀಡಲಾಗಿದೆ. ದೇಶ ಬಿಟ್ಟು ತೆರಳುವ ಮುನ್ನ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಾರದ ಹಿಂದೆ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ಚಿತ್ರಪಥ್ ಕರ್ಮಚಾರಿ ಸೇನಾ ಸಹ ಅದ್ನಾನ್ ಸಮಿ ವಿಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವ ಬಗ್ಗೆ ಆಕ್ಷೇಪ ಎತ್ತಿತ್ತು. ಅಲ್ಲದೇ, ದೇಶ ಬಿಟ್ಟು ತೆರಳುವಂತೆ ಸೇನೆ ಆಗ್ರಹಿಸಿತ್ತು.
ಸಂಗೀತ ಸಂಯೋಜಕ ಅದ್ನಾನ್ ಸಮಿ ಅವರು ತಮ್ಮ ವೀಸಾ ಅವಧಿಯನ್ನು ನವೀಕರಣಗೊಳಿಸಲು 30 ದಿನಗಳ ಕಾಲ ಕಾಲಾವಕಾಶ ಕೂಡಾ ನೀಡಲಾಗಿದೆ.
ತನ್ನದೇ ಆದಂತಹ ವಿಶಿಷ್ಟ ಶೈಲಿಗೆ ಹೆಸರಾಗಿದ್ದ ಗಾಯಕ ಅದ್ನಾನ್ ಸಾಮಿ ಅವರು ಭಾರಿ ತೂಕದ ದೇಹವನ್ನು ಕರಗಿಸಿ ಬಾಲಿವುಡ್ ಹೀರೋಗಳ ರೀತಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಂತರ ದಾಂಪತ್ಯ ಕಲಹ,ವಿವಾಹ ವಿಚ್ಛೇದನ ಪ್ರಕರಣಗಳಿಂದ ಸಂಗೀತದ ಕಡೆಗೆ ಗಮನ ಹರಿಸಲು ಸಮಯ ಇಲ್ಲವಾಗಿ ಕಷ್ಟಪಟ್ಟಿದ್ದರು.
ಯುಎಇ ಮೂಲದ ತಮ್ಮ ಮಾಜಿ ಪತ್ನಿಯನ್ನು 2001ರಲ್ಲಿ ಮದುವೆಯಾಗಿದ್ದರು ಅದ್ನಾನ್ ಸಾಮಿ. ಬಳಿಕ 2004ರಲ್ಲಿ ವಿವಾಹ ವಿಚ್ಛೇದನ ಪಡೆದು ಆಕೆಯಿಂದ ದೂರವಾಗಿದ್ದವರು ಮತ್ತೆ ಒಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.