ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ವೈದ್ಯನ ಹರಸಾಹಸ
ಮುಂಬೈ, ಫೆಬ್ರವರಿ 18: ಕೊರೊನಾದಿಂದ ಮೃತಪಡದಿದ್ದರೂ ಆಸ್ಟ್ರೇಲಿಯಾದಿಂದ ಭಾರತಕ್ಕೆ ತಾಯಿಯ ಶವವನ್ನು ತರಲು ದಂತ ವೈದ್ಯರೊಬ್ಬರು ಹರಸಾಹಸ ಪಡುತ್ತಿದ್ದಾರೆ.
ಮೂರು ವಾರಗಳ ಹಿಂದೆ ಆಸ್ಟ್ರೇಲಿಯಾದಿಂದ ಮುಂಬೈಗೆ ಮಗಳೊಂದಿಗೆ ಬರುತ್ತಿದ್ದ ರೀತಾ ಮೆಹ್ರಾ ಹೃದಯಾಘಾತದಿಂದ ವಿಮಾನದಲ್ಲೇ ಕೊನೆಯುಸಿರೆಳೆದಿದ್ದರು. ತಕ್ಷಣವೇ ಏರ್ ಚೀನಾ ವಿಮಾನವು ಝೆಂಗ್‌ಝೋ ಏರ್‌ಪೋರ್ಟ್‌ನಲ್ಲಿ ತುರ್ತು ನಿಲುಗಡೆ ಮಾಡಿದರು.
ತಕ್ಷಣ ಶವವನ್ನು ಅಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಾಯಿ ಮೃತಪಟ್ಟು 24 ದಿನಗಳು ಕಳೆದರೂ ಶವವನ್ನು ನೀಡುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ ಎಂದು ದಂತ ವೈದ್ಯ ಪುನೀತ್ ಮೆಹ್ರಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆಕೆ ರಾಷ್ಟ್ರಪತಿ, ಪ್ರಧಾನಿ ಹಾಗೂ ಎಂಇಎಗೂ ಕೂಡ ಪತ್ರ ಬರೆದಿದ್ದಾರೆ.ಹೆನನ್ ಪ್ರದೇಶದಲ್ಲಿರುವ ಪ್ರಾವಿನ್ಶಿಯಲ್ ಆಸ್ಪತ್ರೆಯಲ್ಲಿ ತಾಯಿಯ ಶವವಿದೆ. ವಿಶೇಷ ವಿಮಾನವನ್ನು ಕಳುಹಿಸಿ ತಾಯಿಯ ಮೃತದೇಹವನ್ನು ತೆಗೆದುಕೊಂಡು ಬನ್ನಿ ಎಂದು ವೈದ್ಯ ಅಂಗಲಾಚಿ ಕೇಳಿಕೊಳ್ಳುತ್ತಿದ್ದಾರೆ.
ವೆಬ್‌ಸೈಟ್ ಮೂಲಕ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದೇನೆ. ಬೀಜಿಂಗ್ ರಾಯಭಾರಿಗೂ ಕೂಡ ಇ-ಮೇಲ್ ಕಳುಹಿಸಿದ್ದೇನೆ. ನಾನು ತಕ್ಷಣವೇ ಮುಂಬೈಗೆ ವಾಪಾಸಾಗಿದ್ದೇನೆ ಆದರೆ ತಾಯಿಯ ದೇಹ ಅಲ್ಲಿಯೇ ಇದೆ.
ಕೊರೊನಾ ವೈರಸ್ ಭೀತಿ ಇರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಆದರೆ ನನ್ನ ತಾಯಿಗೆ ಯಾವುದೇ ರೋಗವಿರಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಚೀನಾದಲ್ಲಿ 1700ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸುಮಾರು 20 ಕ್ಕೂ ಹೆಚ್ಚು ದೇಶಗಳನ್ನು ಕೊರೊನಾ ಆವರಿಸಿದೆ.












Click it and Unblock the Notifications