Breaking; ಮನೆ ಊಟಕ್ಕಾಗಿ ಕೋರ್ಟ್ ಮೊರೆ ಹೋದ ನವನೀತ್ ಕೌರ್
ಮುಂಬೈ, ಏಪ್ರಿಲ್ 28; ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರವಿ ರಾಣಾ ಮುಂಬೈ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಇಬ್ಬರೂ ಸಹ ಮನೆಯ ಊಟ ತರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನವನೀತ್ ಕೌರ್ ರಾಣಾ, ರವಿ ರಾಣಾ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಶುಕ್ರವಾರ ಕೋರ್ಟ್‌ನಲ್ಲಿ ನಡೆಯಲಿದೆ. ಏಪ್ರಿಲ್ 25ರಂದು ಬಾಂದ್ರಾದ ರಜೆ ಕಾಲದ ವಿಶೇಷ ನ್ಯಾಯಾಲಯ ದಂಪತಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸವ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಸಂಸದೆ ನವನೀತ್ ಕೌರ್ ಮತ್ತು ಆಕೆಯ ಪತಿ ರವಿ ರಾಣಾರನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ದಂಪತಿಗಳು ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣಲ್ಲಿ ಜಾಮೀನು ಕೋರಿರುವ ಅರ್ಜಿ ವಿಚಾರಣೆ ಮುಂಬೈ ಸೆಷನ್ಸ್ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿದೆ.
ನವನೀತ್ ಕೌರ್ ಪುತ್ರಿ 8 ವರ್ಷದ ಆರೋಹಿ ರಾಣಾ ಬುಧವಾರ ತಮ್ಮ ನಿವಾಸದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಂದೆ-ತಾಯಿ ಬೇಗ ಬಿಡುಗಡೆಯಾಗಲಿ ಎಂದು ಚಾಲೀಸಾ ಪಠಿಸಿದ್ದರು.
ಹನುಮಾನ್ ಚಾಲೀಸಾ ವಿವಾದ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಇದೇ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದೆ.












Click it and Unblock the Notifications