ಮಹಾರಾಷ್ಟ್ರ: ಮಾ.3ರವರೆಗೂ ಇಡಿ ವಶಕ್ಕೆ ಸಚಿವ ನವಾಬ್ ಮಲೀಕ್
ಮುಂಬೈ, ಫೆಬ್ರವರಿ 24: ಮಹಾರಾಷ್ಟ್ರದ ಸಚಿವ ಹಾಗೂ ಎನ್‌ಸಿಪಿ ಮುಖಂಡ ನವಾಬ್ ಮಲೀಕ್ ಅವರನ್ನು ಪಿಎಂಎಲ್ಎ ಕೋರ್ಟ್ ಮಾರ್ಚ್ 3ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಲಾಗುತ್ತಿದೆ.
ಮನಿಲಾಂಡ್ರಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದರು. ದಾವೂದ್ ಸೋದರಿ ಹಸೀನಾ ಪಾರ್ಕರ್ ಮನೆ ಮೇಲೂ ಜಾರಿ ನಿರ್ದೇಶನಾಲಯ ತಂಡ ದಾಳಿ ನಡೆಸಿದ್ದರು.
ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ ನವಾಬ್ ಮಲೀಕ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿ ಬಂಧಿಸಿದ್ದರು.

ಎಂಟು ಗಂಟೆಗಳ ವಿಚಾರಣೆ ನಂತರ ನ್ಯಾಯಾಲಯಕ್ಕೆ ಹಾಜರು:
ಎಂಟು ಗಂಟೆಗಳ ಸುದೀರ್ಘ ವಿಚಾರಣೆ ನಂತರ ನವಾಬ್ ಮಲೀಕ್ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ತಮ್ಮನ್ನು ಬಲವಂತವಾಗಿ ಕರೆದುಕೊಂಡು ಹೋಗಿರುವ ಬಗ್ಗೆ ನವಾಬ್ ಮಲೀಕ್ ಹೇಳಿದ್ದಾರೆ. ಇಡಿ ಅಧಿಕಾರಿಗಳು ತಮಗೆ ಯಾವುದೇ ರೀತಿ ಸಮನ್ಸ್ ನೀಡಿರಲಿಲ್ಲ ಎಂದು ದೂಷಿಸಿದರು.
ಹೋರಾಟ ಮುಂದುವರಿಸುವುದಾಗಿ ಹೇಳಿಕೆ:
ಜಾರಿ ನಿರ್ದೇಶನಾಲಯದ ಕಚೇರಿಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ಯಾವುದೇ ರೀತಿ ಅಂಜದೇ ಮಾಧ್ಯಮಗಳತ್ತ ನವಾಬ್ ಮಲೀಕ್ ಕೈ ಬೀಸಿದರು. "ನಾನು ಇದರ ವಿರುದ್ಧ ಹೋರಾಡುತ್ತೇನೆ ಹಾಗೂ ಗೆಲ್ಲುತ್ತೇನೆ. ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದರು. ನಂತರ ಇಡಿ ಅಧಿಕಾರಿಗಳು ಅವರನ್ನು ವಾಹನದಲ್ಲಿ ವೈದ್ಯಕೀಯ ತಪಾಸಣೆಗಾಗಿ ಸರ್ಕಾರಿ ಜೆಜೆ ಆಸ್ಪತ್ರೆಗೆ ಕರೆದೊಯ್ದರು.
ನವಾಬ್ ಮಲೀಕ್ ರಾಜೀನಾಮೆಯಿಲ್ಲ:
ನವಾಬ್ ಮಲಿಕ್ ರಾಜೀನಾಮೆ ನೀಡುವುದಿಲ್ಲ ಎಂದು ಒತ್ತಿ ಹೇಳಿದ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್, "ಕಳೆದ 30 ವರ್ಷಗಳಲ್ಲಿ, ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾರೂ ನವಾಬ್ ಮಲಿಕ್ ಹೆಸರನ್ನು ತೆಗೆದುಕೊಂಡಿಲ್ಲ. ಆದರೆ ಅವರು ಈಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ, ಆದ್ದರಿಂದ ಅವರ ಬಾಯಿ ಮುಚ್ಚಿಸಲು ಬಂಧಿಸಲಾಗಿದೆ," ಎಂದು ಆರೋಪಿಸಿದರು. ಗುರುವಾರ ಮಂತ್ರಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದ ಬಳಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ನಾಲ್ಕು ತಿಂಗಳಿನಲ್ಲಿ ಇಬ್ಬರು ಮಹಾರಾಷ್ಟ್ರ ಸಚಿವರ ಬಂಧನ:
ನವಾಬ್ ಮಲೀಕ್ ಕಳೆದ ನಾಲ್ಕು ತಿಂಗಳಿನಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿದ ಮಹಾರಾಷ್ಟ್ರದ ಎರಡನೇ ಸಚಿವರಾಗಿದ್ದಾರೆ. 2021ರ ನವೆಂಬರ್‌ನಲ್ಲಿ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಇಡಿ ಬಂಧಿಸಿತ್ತು. ಮಲಿಕ್ ಬಂಧನದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ನಿವಾಸದಲ್ಲಿ ಪಕ್ಷದ ಉನ್ನತ ನಾಯಕರ ತುರ್ತು ಸಭೆಗೆ ಕರೆ ನೀಡಿದ್ದಾರೆ.












Click it and Unblock the Notifications