ಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿದ ಶಿವಸೇನಾ
ಮುಂಬೈ, ನವೆಂಬರ್ 19: ಶಿವಸೇನಾ ಜತೆ ಸೇರಿಕೊಂಡು ಸರ್ಕಾರ ರಚಿಸಲು ಆರಂಭದಲ್ಲಿ ಹುಮ್ಮಸ್ಸು ತೋರಿದ್ದ ಎನ್‌ಸಿಪಿ ಈಗ ಅದಕ್ಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಉದ್ಧವ್ ಠಾಕ್ರೆ ನೇತೃತ್ವದ ಸೇನಾ ಪಾಳೆಯದಲ್ಲಿ ದಿಗಿಲು ಮೂಡಿಸಿದೆ. ಈ ನಡುವೆ ಶಿವಸೇನಾ ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಯಾರೂ ಮಾತನಾಡದೆಯೇ ಇದ್ದ ಸಂದರ್ಭದಲ್ಲಿ ಬಾಳ ಸಾಹೇಬ್ ಠಾಕ್ರೆ ಅವರು ಇತರ ಪಕ್ಷಗಳೊಂದಿಗೆ ಸೇರಿ ಎನ್‌ಡಿಎ ರಚಿಸಿದ್ದರು. ಈಗ ಎನ್‌ಡಿಎ ನಡೆಸುತ್ತಿರುವವರು ಆಗ ಎಲ್ಲಿಯೂ ಇರಲಿಲ್ಲ. ಬಾಳಸಾಹೇಬ್ ಠಾಕ್ರೆ ಅವರ ಪುಣ್ಯತಿಥಿಯ ವೇಳೆಯಲ್ಲಿಯೇ ಎನ್‌ಡಿಎಯಿಂದ ಸೇನಾವನ್ನು ಹೊರಹಾಕುತ್ತಿರುವುದು ಅವರಿಗೆ ಮಾಡುತ್ತಿರುವ ಅವಮಾನ ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಹೇಳಿದೆ.
ತನಗೊಂದು ಮಾತು ಹೇಳದೆಯೇ ಎನ್‌ಡಿಎದಿಂದ ಸೇನಾವನ್ನು ಹೊರಗಿಟ್ಟಿರುವುದು ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಹೇಳಿರುವ ಸಾಮ್ನಾ, ಮಹಾರಾಷ್ಟ್ರದಲ್ಲಿನ ಇಂತಹ ಅಹಂಕಾರಿ ವ್ಯಕ್ತಿಗಳ ಅಸ್ತಿತ್ವವನ್ನು ತಾನು ಅಂತ್ಯಗೊಳಿಸುವುದಾಗಿ ಹೇಳಿಕೊಂಡಿದೆ. ಮಹಾರಾಷ್ಟ್ರದ ವಿರುದ್ಧ ಅವರು ಯುದ್ಧ ಶುರುಮಾಡಿದರೆ ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂಬುದಾಗಿ ಎಚ್ಚರಿಸಿದೆ.

ಮೊಹಮ್ಮದ್ ಘೋರಿಗೆ ಹೋಲಿಕೆ
ಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿರುವ ಸಾಮ್ನಾ, 'ಮೊಹಮ್ಮದ್ ಘೋರಿಯನ್ನು 17 ಬಾರಿ ಸೋಲಿಸಿದ ಬಳಿಕವೂ ಆತನನ್ನು ಬದುಕಲು ಬಿಟ್ಟು ಪೃಥ್ವಿರಾಜ್ ಚೌಹಾಣ್ ಮಾಡಿದ ತಪ್ಪಿನಂತೆಯೇ ನಾವೂ ತಪ್ಪು ಮಾಡಿದೆವು. ಘೋರಿ ಬಳಿಕ ಪ್ರಬಲನಾಗಿ ಬೆಳೆದ, 18ನೇ ಯುದ್ಧದಲ್ಲಿ ಚೌಹಾಣ್‌ನನ್ನು ಜೈಲಿಗೆ ಹಾಕಿದ' ಎಂದು ಹೇಳಿದೆ.

ಮಹಾರಾಷ್ಟ್ರಕ್ಕೆ ಹಿಂಬದಿಯಿಂದ ಇರಿದರು
ಯಾರೂ ಬೆಂಬಲ ನೀಡಲು ಸಿದ್ಧರಿರದವರಿಗೆ ಶಿವಸೇನಾ ಜತೆಯಾಗಿ ನಿಂತಿತ್ತು. ಆ ಜನರಿಂದಲೇ ನಾವು ಮೋಸಕ್ಕೆ ಒಳಗಾದೆವು. ಮಹಾರಾಷ್ಟ್ರಕ್ಕೆ ಹಿಂಬದಿಯಿಂದ ಇರಿಯಲಾಗಿದೆ. ಎನ್‌ಡಿಎಯಿಂದ ತೆಗೆದುಹಾಕುವ ಮುನ್ನ ಶಿವಸೇನಾಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದೆ.

ಬಿಜೆಪಿ ಕ್ರಿಯೆ ಅಪಾಯಕಾರಿ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು 'ರಾಜ' ಎಂದು ವ್ಯಂಗ್ಯವಾಡಿರುವ ಶಿವಸೇನಾ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಅವಕಾಶವನ್ನೇ ನೀಡಲಿಲ್ಲ. ಈಗ ಅವರ ಮೇಲೆ ರೈತರು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಅದನ್ನೂ ಅವರು ಈಡೇರಿಸಲಿಲ್ಲ. ಇಂದು ಬಿಜೆಪಿ ಎಚ್ಚರಿಕೆಯಿಂದ ಮಾತುಗಳನ್ನಾಡುತ್ತಿದೆ. ಆದರೆ ಅದರ ಕ್ರಿಯೆಗಳು ಮಾತ್ರ ಬಹಳ ಅಪಾಯಕಾರಿಯಾಗಿದೆ ಎಂದು ಟೀಕಿಸಿದೆ.

ಸಂಖ್ಯೆಗಳ ಬಗ್ಗೆ ಶಿವಸೇನಾವನ್ನೇ ಕೇಳಿ
ಮಹಾರಾಷ್ಟ್ರದ 288 ಸದಸ್ಯರ ವಿಧಾನಸಭೆಯಲ್ಲಿ ತಮಗೆ 170 ಶಾಸಕರ ಬೆಂಬಲ ಸಿಗಲಿದೆ ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ತಮಗೆ ಅಂಕಿ-ಸಂಖ್ಯೆಗಳ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ಶಿವಸೇನಾಕ್ಕೆ 170 ಶಾಸಕರ ಬೆಂಬಲ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪವಾರ್, 'ನನಗೆ ಈ 170 ಅಂಕಿ ಸಂಖ್ಯೆಗಳ ಬಗ್ಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ' ಎಂದರು. ಸರ್ಕಾರ ರಚನೆಗೆ ಶಿವಸೇನಾ ಜತೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಕೈಜೋಡಿಸುತ್ತವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.












Click it and Unblock the Notifications