ಸಲ್ಮಾನ್ ತಂಗಿ ಬರ್ಥ್ ಡೇ ಪಾರ್ಟಿ ಕಿರಿಕಿರಿ, ಆಯೋಜಕರಿಗೆ ದಂಡ
ಮುಂಬೈ, ಆಗಸ್ಟ್ 2: ನಟ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಹುಟ್ಟುಹಬ್ಬ ಆಚರಣೆ ಸಮಾರಂಭದ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಬರ್ಥ್ ಡೇ ಪಾರ್ಟಿ ಆಯೋಜಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.
ಅರ್ಪಿತಾ ಖಾನ್ ಹೆಸರಲ್ಲಿ ಸಂತೋಷ್ ಮಾನೆ ಎನ್ನುವವರು ಆಯೋಜಿಸಿ ಮೋಜು ಮಸ್ತಿಯ ಪಾರ್ಟಿಯಿಂದ ನೆರೆಹೊರೆಯವರಿಗೆ ಕಿರಿಕಿರಿಯಾಗಿದೆ. ಮಧ್ಯರಾತ್ರಿಯಾದರೂ ಅಬ್ಬರದ ಸಂಗೀತದಿಂದ ಬೇಸತ್ತ ಪಕ್ಕದ ಮನೆಯವರು ಪೊಲೀಸರಿಗೆ ದೂರಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ತಡರಾತ್ರಿ 2.30 ಗಂಟೆ ದಾಟಿದರೂ ಪಾರ್ಟಿ ಮಾಡುತ್ತಾ ಇತರರಿಗೆ ತೊಂದರೆ ಉಂಟು ಮಾಡಿದ್ದಕ್ಕೆ ಪಾರ್ಟಿ ಆಯೋಜಕರಿಗೆ ಛೀಮಾರಿ ಹಾಕಿದ್ದಾರೆ.
ಫೆಸಿಫಿಕ್ ಹೈಟ್ಸ್ ಪ್ರದೇಶದ ಪಾಲಿ ಹಿಲ್ನಲ್ಲಿನ ಮನೆಯೊಂದರಲ್ಲಿ ನಡೆದ ಪಾರ್ಟಿ ನಿಲ್ಲಿಸಿದ ಮೇಲೆ ಆಯೋಜಕ ಮಾನೆಗೆ ನಿಯಮದಂತೆ 12,500 ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೇ ಮಾನೆ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಸೆಕ್ಷನ್ 33 (ಆರ್) (3) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆ ವಕ್ತಾರರು ಹೇಳಿದ್ದಾರೆ. (ಪಿಟಿಐ)












Click it and Unblock the Notifications