ಮುಂಬೈ ಆಟೋಚಾಲಕನ ಕರುಳು ಕಿವುಚುವ ಕತೆಯಿದು!

Posted By:
Subscribe to Oneindia Kannada

ಮುಂಬೈ, ಮೇ 17: ಈ ಕತೆಯನ್ನು ಕೇಳಿದರೆ ನಿಮಗೆ ಒಂದುಕ್ಷಣ ಕರುಳು ಚುರುಕ್ ಎನ್ನಬಹುದು. ಮರುಕ್ಷಣ ಮಾನವೀಯತೆ ಇನ್ನೂ ಬದುಕಿದೆಯಲ್ಲ ಎಂಬ ಸಂತಸವೂ ಆಗಬಹುದು.

ಮೊಹಮ್ಮದ್ ಸಯ್ಯದ್ ಶೇಖ್ ಎಂಬ 26 ವರ್ಷದ ಆಟೋ ಚಾಲಕ ತನ್ನ ಎರಡು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡೇ ಆಟೋ ಓಡಿಸುವ ದೃಶ್ಯ ಮುಂಬೈಗೆ ತೆರಳಿದ ಕೆಲವರಿಗಾದರೂ ಕಾಣಿಸಿರಬಹುದು. ಯಾಕೆ ಈತ ಈ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಬರದೆ ಈ ಟ್ರಾಫಿಕ್ ರೋಡಿನಲ್ಲಿ ತೊಡೆಯ ಮೇಲೆ ಮಲಗಿಸಿಕೊಂಡು ಆಟೋ ಓಡಿಸುತ್ತಾನೆ? ಎಂಬ ಅನುಮಾನ ಹಲವರಿಗೆ ಕಾಡಿರಬಹುದು. [ತೀರಿಹೋದ ಆ ಹುಡುಗನದು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ]

ಪಾರ್ಶ್ವವಾಯು ಪೀಡಿತ ಪತ್ನಿಗೆ ಮಗುವನ್ನು ನೋಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಪತ್ನಿ-ಮಗುವನ್ನು ನೋಡಿಕೊಂಡು ಮೊಹಮ್ಮದ್ ಸಯ್ಯದ್ ಮನೆಯಲ್ಲೇ ಉಳಿದರೆ ತುತ್ತಿನ ಚೀಲ ತುಂಬುವುದು ಹೇಗೆ? ಅದಕ್ಕೆಂದೇ ಮಗುವನ್ನು ತೊಡೆಯ ಮೇಲೇ ಕೂರಿಸಿಕೊಂಡು ಈತ ಆಟೋ ಓಡಿಸುತ್ತಾನೆ![ಬೈಕ್ ನಲ್ಲಿ ಮಗುವಿನ ಶವವನ್ನು ತೆಗೆದುಕೊಂಡು ಹೋದ ಅಸಹಾಯಕ ತಂದೆ]

ಇತ್ತೀಚೆಗೆ ಈತನ ಆಟೋ ಹತ್ತಿದ್ದ ವಿನೋದ್ ಕಪ್ರಿ ಎಂಬ ವ್ಯಕ್ತಿಗೆ ಆತನ ಸ್ಥಿತಿ ಕಂಡು ಮರುಕಹುಟ್ಟಿದೆ. ಎಲ್ಲರಂತೆ, ಅಯ್ಯೋ ಪಾಪ ಎಂದು ಹೇಳಿ ಮೀಟರ್ ತೋರಿಸಿದ್ದಕ್ಕಿಂತ ಹತ್ತು ರೂಪಾಯಿ ಹೆಚ್ಚೇ ಕೊಟ್ಟು ಅವರು ಸುಮ್ಮನಾಗಲಿಲ್ಲ.[ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]

ಜಾದೂ ಮಾಡಿತು ಟ್ವಿಟ್ಟರ್!

ಬದಲಾಗಿ ಆತನ ಫೋಟೊ ತೆಗೆದು, ಆತನ ಪರಿಸ್ಥಿತಿ ವಿವರಿಸಿ, ದಯಾಮಯಿಗಳು ಆತನಿಗೆ ಸಹಾಯ ಮಾಡುವಂತೆ ಕೋರಿ ಟ್ವಿಟ್ಟರ್ ನಲ್ಲಿ ಆತನ ಚಿತ್ರವನ್ನು ಅಪ್ ಲೋಡ್ ಮಾಡಿದರು. ಅದರೊಂದಿಗೆ ಅವರ ಫೋನ್ ನಂಬರ್ ಸಹ ನಮೂದಿಸಿದ್ದರು. ಇದರಿಂದ ಆತನ ಪರಿಸ್ಥಿತಿ ಬದಲಾಗಿಬಿಡುತ್ತದೆ ಎಂಬ ಅತಿಯಾದ ವಿಶ್ವಾಸವೇನೂ ಇರಲಿಲ್ಲವಾದರೂ, ಪ್ರಯತ್ನಿಸಿನೋಡೋಣ ಎಂಬ ಭಾವನೆ ವಿನೋದ್ ಅವರದಾಗಿತ್ತು.

ನೀರೀಕ್ಷೆಯನ್ನೂ ಮೀರಿ ಪ್ರತಿಕ್ರಿಯೆ

ಆದರೆ ಅವರ ನಿರೀಕ್ಷೆಯನ್ನು ಮೀರಿ ಮಾನವೀಯ ನೆರವು ಹರಿದುಬಂತು. ನೂರಾರು ಜನರು ಮೊಹಮ್ಮದ್ ಸಯ್ಯದ್ ಗೆ ಫೋನ್ ಮಾಡಿ ಅವರ ಬ್ಯಾಂಕ್ ಖಾತೆಯ ವಿವರ ಕೇಳಿ ತಮ್ಮ್ ಕೈಲಾದ ಸಹಾಯ ಮಾಡಿದರು. ಸಾಮಾಜಿಕ ಜಾಲತಾಣಗಳ ನೈಜ ಜವಾಬ್ದಾರಿ ಈ ಮೂಲಕ ಅನಾವರಣವಾಯಿತು ಅಂದರೆ ತಪ್ಪಾಗಲಾರದು.

ಎರಡು ಲಕ್ಷ ರೂ. ಸಂಗ್ರಹ

ಈಗಾಗಲೇ 2 ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದ್ದು, ಸಯ್ಯದ್ ಪತ್ನಿಯ ಚಿಕಿತ್ಸೆಗೆ ಈ ಹಣ ಸಹಾಯಕವಾಗಲಿದೆ. ಇನ್ನೆರಡು ವಾರದಲ್ಲೇ ಪತ್ನಿ ಹುಷಾರಾಗುತ್ತಾಳೆ ಎಂದು ಉತ್ಸಾಹದಿಂದ ಹೇಳುತ್ತಾರೆ ಸಯ್ಯದ್.

ನೈಜ ಜವಾಬ್ದಾರಿ ಅನಾವರಣ

ಸಾಮಾಜಿಕ ಜಾಲತಾಣಗಳು ಕೇವಲ ಹರಟೆ, ಚರ್ವಿತ ಚರ್ವಣ ವಾದಕ್ಕಷ್ಟೇ ಸೀಮಿತ ಎಂಬ ಹಲವರ ಭಾವನೆ ಈ ಘಟನೆಯಿಂದ ಸುಳ್ಳಾದಂತಾಗಿದೆ. ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ?

ಜಾತಿ-ಮತ ಮೀರಿ ಸಹಾಯ ಹಸ್ತ

ಮಾನವೀಯತೆಯ ವಿಷಕ್ಕೆ ಬಂದಾಗ ಜಾತಿ-ಮತವನ್ನು ಮೀರಿ ಸಹಾಯ ಹಸ್ತ ಚಾಚುವ ಮಾನವೀಯ ಆತ್ಮಗಳು ನಮ್ಮ ದೇಶದಲ್ಲಿ ಇಂದಿಗೂ ಇದ್ದಾವಲ್ಲ ಎಂಬುದೇ ಸಮಾಧಾನದ ಸಂಗತಿ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is so relieving to see how an auto driver from Mumbai is getting so much help and support from social media. Good to see there are such good souls in our country. Here is story of the auto driver who is carrying his two years old sun on his lap since her wife paralysed.
Please Wait while comments are loading...