ಐಟಂ ರಾಣಿ ರಾಖಿ ಸಾವಂತ್ ಆಸ್ತಿ ಎಷ್ಟು ಗೊತ್ತಾ?
ಮುಂಬೈ, ಏ.2: ಚೆಲ್ಲು ಚೆಲ್ಲಿನ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ದಿಢೀರನೆ ಲೋಕಸಭಾ ಚುನಾವಣೆಗೆ ಇಳಿಸ ರಾಖಿ ಸಾವಂತ್ ಆರಂಭದಲ್ಲಿ ಒಂದೆರಡು ಪಕ್ಷಗಳ ಅಂಗಳದಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ತಮ್ಮದೇ ಆದ "ರಾಷ್ಟ್ರೀಯ ಆಮ್ ಪಾರ್ಟಿ" ಸ್ಥಾಪಿಸಿಕೊಂಡು ಹಸಿರು ಮೆಣಸಿನಕಾಯಿ ಚಿಹ್ನೆಯಡಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ.
ಅಂದಹಾಗೆ, ಐಟಂ ಸಾಂಗ್ ರಾಣಿ ರಾಖಿ ಸಾವಂತ್ ಪ್ರತಿಷ್ಠಿತ ಮುಂಬೈ ವಾಯವ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಗುರುದಾಸ್ ಕಾಮತ್ ಮತ್ತು ಶಿವಸೇನೆಯ ಗಜಾನನ ಕೀರ್ತಿಕಾರ್ ಅವರ ನಡುವೆ 36 ವರ್ಷದ ಚೆಲುವೆ Rashtriya Aam Party ಅಧಿನಾಯಕಿ ರಾಖಿ ಸಾವಂತ್ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ (ಏಪ್ರಿಲ್ 24ರಂದು ಚುನಾವಣೆ).
ಗಾಢ ನಿದ್ರೆಯಲ್ಲಿರುವ ಸಂಸದರನ್ನು ಎಚ್ಚರಿಸುವ ಉದ್ದೇಶದಿಂದ ತಾವು ಕಣಕ್ಕಿಳಿದಿರುವುದಾಗಿ ಹೇಳಿರುವ ರಾಖಿ, ಜನರು ನನ್ನ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಗೆದ್ದು ಬಂದು ಅವರ ಸಮಸ್ಯೆಗಳನ್ನು ಪರಿಹರಿಸುವೆ ಎಂದು ರಾಖಿ ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇಂತಿಪ್ಪ ರಾಖಿ ತಮ್ಮ ಬಳಿ ಬರೋಬ್ಬರಿ 14.69 ಕೋಟಿ ರೂಪಾಯಿ ಆಸ್ತಿಯಿದೆ ಎಂದು ಘೋಷಿಸಿದ್ದಾರೆ. ಆದರೆ ತಾವು ಅನ್ ಪಡ್ (ಅನಕ್ಷರಸ್ಥೆ) ಎಂದೂ ಹೇಳಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿರುವ ರಾಖಿ ಅವರು 3.57 ಕೋಟಿ ರೂ. ಸ್ಥಿರಾಸ್ತಿ ಮತ್ತು 11.12 ಕೋಟಿ ರೂ. ಚರಾಸ್ತಿ ಒಡತಿ ಎಂದು ತಿಳಿಸಿದ್ದಾರೆ.
ಷೇರುಗಳಲ್ಲಿ 61.26 ಕೋಟಿ ರೂ. ಹೂಡಿಕೆ ಮಾಡಿದ್ದು, 2.12 ಕೋಟಿ ರೂ. ವಿಮೆ ಮತ್ತು ಅಂಚೆ ಠೇವಣಿ ಇಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೇ ತಮ್ಮ ಬಳಿ 21 ಲಕ್ಷ ರೂ. ಮೌಲ್ಯದ ಒಂದು ಫೋರ್ಡ್ ಎಂಡ್ಯೂವರ್ ಕಾರು ಮತ್ತು 7.55 ಲಕ್ಷ ರೂ. ಚಿನ್ನಾಭರಣ ಇರುವುದಾಗಿಯೂ ಹೇಳಿದ್ದಾರೆ.
ರಾಖಿಗೆ 2.52 ಕೋಟಿ ರೂ ಸಾಲವೂ ಇದೆ. 72.5 ಲಕ್ಷ ರೂ. ಆದಾಯ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿದ್ದಾರೆ. (ಬಿಜೆಪಿಗೆ ಮತ ಹಾಕಿ; ಮೋದಿ ಪ್ರಧಾನಿಯಾಗಲಿ: ರಾಖಿ)












Click it and Unblock the Notifications