ತೈಲ ಬೆಲೆ 50 ರೂ. ಗೆ ಇಳಿಸಲು ಬಿಜೆಪಿಯ ಸೋಲಿಸಲೇ ಬೇಕು: ಸಂಜಯ್ ರಾವತ್
ಮುಂಬೈ, ನವೆಂಬರ್ 04: ತೈಲ ಬೆಲೆಯನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸೋಲಿಸಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಉಪಚುನಾವಣೆಯಲ್ಲಿ ಸೋತ ಬಳಿಕ ಕೇಂದ್ರ ಸರ್ಕಾರವು ಇಂಧನದ ಬೆಲೆಯನ್ನು ಲೀಟರ್‌ಗೆ 5 ರೂ. ಕಡಿಮೆ ಮಾಡಿದೆ. 50 ರೂ. ಕಡಿಮೆ ಮಾಡಬೇಕಾದರೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಲೇಬೇಕು. ಸಾಲ ಮಾಡಿ ದೀಪಾವಳಿಯನ್ನು ಆಚರಿಸುವಂತಾಗಿದೆ. ಹಣದುಬ್ಬದಿಂದಾಗಿ ಹಬ್ಬದ ವಾತಾವರಣವೂ ಇಲ್ಲ ಎಂದು ಹೇಳಿದ್ದಾರೆ.
ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಅಬಕಾರಿ ಸುಂಕ ಕಡಿತಗೊಳಿಸಿದ್ದು, ವಾಹನ ಸವಾರರು ಸ್ವಲ್ಪ ನಿಟ್ಟೂಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂ. ಕಡಿತ ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ನಿರ್ಧಾರವಾಗುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ಕುಸಿತ, ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಪರಿಣಾಮ ಭಾರತದಲ್ಲಿ ಇಂದು ಇಂಧನ ದರ ಭಾರಿ ಇಳಿಕೆ ಕಂಡಿದೆ.
ಕಳೆದ ಏಳು ದಿನಗಳಲ್ಲಿ ಇಂಧನ ದರ ಏರಿಕೆ ಮಾಡಲಾಗಿತ್ತು. ಸತತವಾಗಿ ಸರಾಸರಿ 35-40 ಪೈಸೆ ಪ್ರತಿ ಲೀಟರ್‌ನಂತೆ ಇಂಧನ ದರ ಏರಿಕೆ ಕಂಡಿತ್ತು.
ಮೆಟ್ರೋ ನಗರಗಳಲ್ಲಿ ಇಂದು (ನ.4) ದಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಮಂಗಳವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 36 ಪೈಸೆ ಹೆಚ್ಚಳವಾಗಿತ್ತು. ಗುರುವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 6.07 ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.75 ಪ್ರತಿ ಲೀಟರ್ ನಂತೆ ಇಳಿಕೆ ಯಾಗಿದೆ.
ತಮಿಳುನಾಡಿನ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿತ್ತು. ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರು ತಗ್ಗಿತ್ತು. ಹೀಗಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಕಡಿಮೆಯಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೆಯೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ನಂತರ ಚೇತರಿಸಿಕೊಂಡು 85 ಪ್ಲಸ್ ಡಾಲರ್ ಮೇಲಕ್ಕೇರಿತ್ತು.
ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 110 ರು ಗಿಂತ ತಗ್ಗಿರಲಿಲ್ಲ. ಈಗ 9-10 ರಾಜ್ಯಗಳಲ್ಲಿ ಇಂದು ಬೆಲೆ ಇಳಿಕೆಯಾಗಲಿದೆ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 13 ರು ಪ್ರತಿ ಲೀಟರ್ ಹಾಗೂ ಡೀಸೆಲ್ 11 ರು ಪ್ರತಿ ಲೀಟರ್ ಆಗಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.