ಆ ಪ್ರಶ್ನೆಗೆ ಬಿಜೆಪಿಗರು ಹೆದರಿ ಟಿಕೆಟ್ ಕೊಡಲಿಲ್ಲ: ಅನಿಲ್ ದೇಶ್‌ಮುಖ್
ಮುಂಬೈ, ಅಕ್ಟೋಬರ್ 8: ಮಹಾರಾಷ್ಟ್ರದ ಹೆಸರಿಗೆ ಅವಮಾನ ಮಾಡಿದ ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೀರಾ? ಎಂದು ಬಿಜೆಪಿ ನಾಯಕರನ್ನು ಮಹಾ ವಿಕಾಸ್ ಅಘಾಡಿ ಪ್ರಶ್ನಿಸಿದ್ದ ಕಾರಣದಿಂದ ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ ಪಾಂಡೆಗೆ ಪಕ್ಷದಿಂದ ಟಿಕೆಟ್ ನೀಡಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.
ಗುಪ್ತೇಶ್ವರ ಪಾಂಡೆ ಅವರಿಗೆ ಟಿಕೆಟ್ ಮಾಡುವುದು ಪಕ್ಷದ ವಿಚಾರ. ಅವರ ಪರವಾಗಿ ಪ್ರಚಾರ ಮಾಡುತ್ತೀರಾ ಎಂದು ನಾವು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದೆವು. ಬಹುಶಃ ಈ ಪ್ರಶ್ನೆಯ ಭಯದಿಂದಲೇ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ನೀಡಲಿಲ್ಲ ಎನಿಸುತ್ತದೆ ಎಂದು ದೇಶ್‌ಮುಖ್ ಹೇಳಿದ್ದಾರೆ.
ಡಿಜಿಪಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ ಗುಪ್ತೇಶ್ವರ್ ಪಾಂಡೆ, ಬಕ್ಸರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಯಕೆಯೊಂದಿಗೆ ಜೆಡಿಯು ಸೇರಿಕೊಂಡಿದ್ದರು. ಆದರೆ ಬಿಹಾರ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿರುವ 115 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಹರಿಹಾಯ್ದಿದ್ದ ಅನಿಲ್ ದೇಶ್‌ಮುಖ್, ಮಹಾರಾಷ್ಟ್ರದ ಬಗ್ಗೆ ಕೀಳಾಗಿ ಮಾತನಾಡಿ ಅವಮಾನಿಸಿದ್ದ ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೀರಾ ಎಂದು ಕೇಳಿದ್ದರು.
ಸುಶಾಂತ್ ಸಿಂಗ್ ರಜಪೂತ್ ಅವರದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಏಮ್ಸ್ ತಂಡ ವರದಿ ನೀಡಿದ ಬಳಿಕ ಫಡ್ನವೀಸ್ ವಿರುದ್ಧ ದೇಶ್‌ಮುಖ್ ಕಿಡಿಕಾರಿದ್ದರು. ಸುಶಾಂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದ ಗುಪ್ತೇಶ್ವರ ಪಾಂಡೆ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.












Click it and Unblock the Notifications