ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ತಿರುವು, ಪವಾರ್ ಗೆ ಠಾಕ್ರೆ ಕರೆ!
ಮುಂಬೈ, ನವೆಂಬರ್ 02: ಸರ್ಕಾರ ರಚನೆಯ ಕುರಿತಂತೆ ತನ್ನ ಬೇಡಿಕೆಗಳಿಗೆ ಒಪ್ಪದ ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸುವ ಬಗ್ಗೆ ಶಿವಸೇನೆ ಚಿಂತನೆ ನಡೆಸುತ್ತಿದ್ದು, ಮಹಾರಾಷ್ಟ್ರ ರಾಜಕೀಯಕ್ಕೆ ಭಾರೀ ತಿರುವು ಸಿಕ್ಕಿದೆ.
ಶುಕ್ರವಾರ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಎನ್ ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕರೆ ಮಾಡಿದ್ದು, ಶರದ್ ಪವಾರ್ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ತಲಾ 2.5 ವರ್ಷ ಕ್ರಮವಾಗಿ ಶಿವಸೇನೆ ಮತ್ತು ಬಿಜೆಪಿ ಅಭ್ಯರ್ಥಿಗಳು ಮುಖ್ಯಮಂತ್ರಿಯಾಗುವ 50:50 ಯ ಶಿವಸೇನೆ ಬೇಡಿಕೆಗೆ ಬಿಜೆಪಿ ಸೊಪ್ಪುಹಾಕದ ಪರಿಣಾಮ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ಬಜೆಪಿ ಅಧಿಕಾರ ಕಳೆದುಕೊಳ್ಳಬಹುದು ಎಂಬ ಮಾತತು ಕೇಳಿಬರುತ್ತಿದೆ.
"ಅಕಸ್ಮಾತ್ ಶಿವಸೇನೆ ಮನಸ್ಸು ಮಾಡಿದರೆ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವುದು ಕಷ್ಟವಿಲ್ಲ. ಆದರೆ ಜನರು ಕೊಟ್ಟಿರುವ ಜನಾದೇಶಕ್ಕೆ ವಿರುದ್ಧವಾಗಿ ಹೋಗಲು ನಾಯು ಇಷ್ಟಪಡುವುಸಿಲ್ಲ. ಬಿಜೆಪಿಗೆ ನಾವೇನು ಗಡುವು ನೀಡಿಲ್ಲ. 50:50 ಸೂತ್ರಕ್ಕೆ ಅವರು ಸಿದ್ಧವಿದ್ದರೆ ಈಗಲೇ ಸರ್ಕಾರ ರಚನೆಗೆ ನಮ್ಮ ಅಭ್ಯಂತರವಿಲ್ಲ" ಎಂದು ಸಂಜಯ್ ರಾವತ್ ಹೇಳಿದ್ದರು.
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.












Click it and Unblock the Notifications