ಕಿಡ್ನ್ಯಾಪ್ ಹೇಳಿಕೆಗೆ ಸಮಜಾಯಿಷಿ ನೀಡಿದ ಬಿಜೆಪಿ ಶಾಸಕ
ಮುಂಬೈ, ಸೆಪ್ಟೆಂಬರ್ 05: 'ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನಾನೇ ಅವಳನ್ನು ಅಪಹರಿಸಿ ತಂದು ನಿಮ್ಮೊಂದಿಗೆ ಮದುವೆ ಮಾಡಿಸುತ್ತೇನೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಮ್ ಕದಮ್ , ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡೀದ್ದಾರೆ.
'ನಾನು ಮೊಸರು ಕುಡಿಕೆ ಹಬ್ಬದ ಪ್ರಯುಕ್ತ ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವರೋಧಿಗಳು ಹರಿಬಿಟ್ಟಿದ್ದಾರೆ. ಆದರೆ ಅದರಲ್ಲಿ ಸಂಪೂರ್ಣ ವಿಡಿಯೋವನ್ನು ಹಾಕಲಾಗಿಲ್ಲ. ಆದ್ದರಿಂದ ನನ್ನ ಮಾತಿನ ಅರ್ಥ ಯಾರಿಗೂ ಆಗಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ದಯವಿಟ್ಟು ಸಂಪೂರ್ಣ ವಿಡಿಯೋ ನೋಡಿ. ಆಗ ನನ್ನ ಮಾತು ನಿಮಗೆ ಅರ್ಥವಾಗುತ್ತದೆ ಎಂದಿದ್ದಾರೆ.'
"ಯಾವುದೇ ಕಾರಣಕ್ಕೂ ಪಾಲಕರಿಗೆ ಬೇಸರ ಮಾಡಿ ಓಡಿಹೋಗಿ ಮದುವೆಯಾಗಬೇಡಿ. ಅಕಸ್ಮಾತ್ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ನಾನೇ ಅವರನ್ನು ಅಪಹರಿಸಿ ಒಪ್ಪಿಸಿ ನಿಮ್ಮೊಂದಿಗೆ ಮದುವೆ ಮಾಡುತ್ತೇನೆ. ನಿಮ್ಮ ಪಾಲಕರ ಒಪ್ಪಿಗೆಯನ್ನು ಪಡೆದೇ ಈ ಕೆಲಸ ಮಾಡುತ್ತೇನೆ ಎಂದಷ್ಟೇ ನಾನು ಹೇಳಿದ್ದು" ಎಂದು ಅವರು ಹೇಳಿದ್ದಾರೆ.

'ಮಕ್ಕಳು ಪಾಲಕರ ಮನಸ್ಸಿಗೆ ನೋವುಂಟುಮಾಡಿ ಓಡಿ ಹೋಗಿ ಮದುವೆ ಮಾಡುವುದು ತಪ್ಪು ಎಂಬುದನ್ನು ಹೇಳಲು ಹೊರಟಿದ್ದೆ. ಆದರೆ ಅರ್ಧ ವಿಡಿಯೋವನ್ನಷ್ಟೇ ಹಾಕಿ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ಅವರು ದೂರಿದರು.
ಮುಂಬೈಯಲ್ಲಿ ನಡೆದ ಮೊಸರು ಕುಡಿಕೆ(ಕೃಷ್ಣಾಷ್ಟಮಿ) ಉತ್ಸವದಲ್ಲಿ ಮಾತನಾಡುತ್ತಿದ್ದ ಅವರು, 'ಮಗೆ ಏನಾದರೂ ಸಹಾಯ ಬೇಕಾದರೆ ನನಗೆ ಕರೆ ಮಾಡಿ' ಎಂದು ತಮ್ಮ ಫೋನ್ ನಂಬರ್ ನೀಡಿದ್ದರು. ನಂತರ, 'ನೀವು ಯಾವುದಾದರೂ ಹುಡುಗಿಯನ್ನು ಇಷ್ಟಪಟ್ಟಿದ್ದು, ಆಕೆ ನಿಮ್ಮ ಪ್ರೇಮ ನಿವೇದನೆ ತಿರಸ್ಕರಿಸಿದ್ದರೆ ನನಗೆ ಹೇಳಿ. ನಾನು ಆಕೆಯನ್ನು ಅಪಹರಿಸಿ ನಿಮ್ಮ ಬಳಿ ಕರೆತರುತ್ತೇನೆ' ಎಂದು ಸಹ ಅವರು ಹೇಳಿಕೆ ನೀಡಿದ್ದರು.












Click it and Unblock the Notifications