ಅಧಿಕಾರದ ಆಸೆಗೆ ಬಿದ್ದು ಏಕಾಂಗಿಯಾದರೇ ಅಜಿತ್ ಪವಾರ್?

ಮುಂಬೈ, ನವೆಂಬರ್ 25: ಮಹಾರಾಷ್ಟ್ರ ರಾಜಕಾರಣ ಗಳಿಗೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ರಾತ್ರೋರಾತ್ರಿ ನಡೆದ ಹಠಾತ್ ಬೆಳವಣಿಗೆಯ ನಂತರ ಬೆಳಗಾಗುವುದರಲ್ಲಿ ಬಿಜೆಪಿ-ಎನ್‌ಸಿಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇನೋ ಸರಿ. ಆದರೆ ಈ ಸರ್ಕಾರ ಎಷ್ಟು ದಿನ ಉಳಿಯಲಿದೆ ಎನ್ನುವುದು ಈಗಿರುವ ಪ್ರಶ್ನೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಮಹಾರಾಷ್ಟ್ರದ ಈ ದಿಢೀರ್ ಸರ್ಕಾರ ಅಲ್ಪಾಯುಷಿ ಎಂದೇ ಹೇಳಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್ ತಮಗೆ 145 ಶಾಸಕರ ಬೆಂಬಲ ಇದೆ ಎಂದು ನ.30ರಂದು ಸಾಬೀತುಪಡಿಸಬೇಕಿದೆ. ಅಷ್ಟರ ಒಳಗೆ ಮಹಾರಾಷ್ಟ್ರದಲ್ಲಿ ಯಾವ ರೀತಿಯ ಚಟುವಟಿಕೆಗಳು ನಡೆಯಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯ ಮಾತುಕತೆಗಳು ನಡೆಯುತ್ತಿರುವ ಹಂತದಲ್ಲಿ ಬಿಜೆಪಿ ತನಗೆ ಸರ್ಕಾರ ರಚನೆಯ ಉಸಾಬರಿಯೇ ಬೇಡ ಎಂಬ ನಿಲುವು ಪ್ರಕಟಿಸಿತ್ತು. ಆದರೆ ಮಾಧ್ಯಮಗಳಿಗೂ ಸುಳಿವು ಸಿಗದ ರೀತಿಯಲ್ಲಿ ದಿನಬೆಳಗಾಗುವುದರಲ್ಲಿ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆಯಾಗಿತ್ತು.

ಈ ಎಲ್ಲ ಅಚ್ಚರಿಗಳಿಗೆ ಕಾರಣವಾಗಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಅವರ ನಿರ್ಧಾರ. ಎನ್‌ಸಿಪಿಯ ಸುಮಾರು ಅರ್ಧದಷ್ಟು ಶಾಸಕರ ಬೆಂಬಲದೊಂದಿಗೆ ಬಿಜೆಪಿ ಜತೆಗೂಡಿ ಅವರು ಸರ್ಕಾರ ರಚನೆಗೆ ಮುಂದಾದರು. ಅವರಿಗೆ ನಿಜಕ್ಕೂ ಎನ್‌ಸಿಪಿಯ ಶಾಸಕರ ಬೆಂಬಲ ಇದೆಯೇ? ಈ ವಿಚಾರದಲ್ಲಿ ಅವರು ಆತುರದ ನಿರ್ಧಾರ ತೆಗೆದುಕೊಂಡು ಏಕಾಂಗಿಯಾದರೇ?

ಬಿಜೆಪಿ ಬೆಂಬಲಿತ ಡಿಸಿಎಂ!

ಬಿಜೆಪಿ ಬೆಂಬಲಿತ ಡಿಸಿಎಂ!

ಎನ್‌ಸಿಪಿ ಮೂಲಗಳ ಪ್ರಕಾರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಈಗ ಏಕಾಂಗಿ. ಅವರಿಗೆ ಯಾವ ಶಾಸಕರ ಬೆಂಬಲವೂ ಇಲ್ಲ. ಕೆಲವು ಶಾಸಕರನ್ನು ತಮ್ಮ ಜತೆಗೆ ಕರೆದುಕೊಂಡು ರಾಜಭವನಕ್ಕೆ ತೆರಳಿ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರನ್ನು ನಂಬಿ ಬಂದ ಶಾಸಕರು ಗೊಂದಲಕ್ಕೊಳಗಾಗಿ ಶರದ್ ಪವಾರ್ ಅವರ ನಾಯಕತ್ವಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಇದರಿಂದ ಅಜಿತ್ ಯಾವ ಶಾಸಕರ ಬೆಂಬಲವನ್ನೂ ಹೊಂದಿಲ್ಲ. ಸದ್ಯಕ್ಕೀಗ ಅವರು ಬಿಜೆಪಿ ಬೆಂಬಲಿತ ಉಪಮುಖ್ಯಮಂತ್ರಿಯಾಗಿ ಉಳಿದುಕೊಂಡಿದ್ದಾರೆ.

ವಾಪಸ್ ಬಂದ ಶಾಸಕರು

ವಾಪಸ್ ಬಂದ ಶಾಸಕರು

ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್‌ಸಿಪಿಯಿಂದ 54 ಶಾಸಕರು ಆಯ್ಕೆಯಾಗಿದ್ದರು. ಅವರಲ್ಲಿ ಅಜಿತ್ ಪವಾರ್ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಪಕ್ಷಕ್ಕೆ ಮರಳಿದ್ದಾರೆ ಎಂದು ಎನ್‌ಸಿಪಿ ಹೇಳಿಕೊಂಡಿದೆ. ಶಾಸಕರಾದ ಅನಿಲ್ ಪಟೇಲ್, ಬಾಬಾಸಾಹೇಬ್ ಪಾಟೀಲ್, ದೌಲತ್ ದರೋದಾ ಮತ್ತು ನರಹರಿ ಜಿರ್ವಾರ್ ಅವರನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಅವರನ್ನು ವಾಪಸ್ ಕರೆದುಕೊಂಡು ಬರಲಾಗಿದೆ ಎಂದು ಎನ್‌ಸಿಪಿ ತಿಳಿಸಿದೆ. ಇನ್ನು ನಾಪತ್ತೆಯಾಗಿದ್ದ ಮತ್ತೊಬ್ಬ ಶಾಸಕ ಅಣ್ಣಾ ಬನ್ಸೋಡೆ ಅವರು ಪುಣೆಯಲ್ಲಿ ಕುಟುಂಬದೊಂದಿಗೆ ಸಿಕ್ಕಿದ್ದಾರೆ, ಅವರೂ ಮುಂಬೈಗೆ ಶೀಘ್ರದಲ್ಲಿ ವಾಪಸಾಗಲಿದ್ದಾರೆ ಎಂದು ಹೇಳಿದೆ.

ಅಜಿತ್ ಜತೆಗೆ ಹೋಗುತ್ತಾರಾ ಶಾಸಕರು?

ಅಜಿತ್ ಜತೆಗೆ ಹೋಗುತ್ತಾರಾ ಶಾಸಕರು?

ಅಜಿತ್ ಪವಾರ್ ಊಹಿಸಿದಂತೆ ಶಾಸಕರು ಅವರ ಜತೆಗಿಲ್ಲ. ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಯದಲ್ಲಿ ಹಾಜರಿದ್ದ ಕೆಲವು ಶಾಸಕರು ಬಳಿಕ ಶರದ್ ಪವಾರ್ ಜತೆಗೆ ಕಾಣಿಸಿಕೊಂಡು ನಾವು ಅಜಿತ್ ಪವಾರ್ ನಡೆಗೆ ಬೆಂಬಲ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ನಿಲುವು ನಿಜಕ್ಕೂ ಬದಲಾಗಿದೆಯೇ? ಅಥವಾ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಅಜಿತ್ ಪವಾರ್ ಅವರಿಗೆ ಬೆಂಬಲ ನೀಡುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.

ಎನ್‌ಸಿಪಿ ಬೆಂಬಲ ಇದೆ ಎಂದ ಅಜಿತ್

ಎನ್‌ಸಿಪಿ ಬೆಂಬಲ ಇದೆ ಎಂದ ಅಜಿತ್

ಅಜಿತ್ ಪವಾರ್ ಅವರನ್ನು ಎನ್‌ಸಿಪಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಅವರ ಮನವೊಲಿಸಲು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಜಯಂತ್ ಪಾಟೀಲ್ ಮಾತುಕತೆ ನಡೆಸಿದ್ದರು. ಅದಕ್ಕಾಗಿ ಅಜಿತ್ ಪವಾರ್ ಅವರ ಮನೆಗೆ ತೆರಳಿದ್ದರು. ತಮ್ಮ ಜತೆಗೆ ಈಗಲೂ ಶಾಸಕರ ಬೆಂಬಲವಿದೆ. ಮುಖ್ಯವಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆದಿಯಾಗಿ ಎಲ್ಲರೂ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದೇ ಅಜಿತ್ ಪವಾರ್ ಪ್ರತಿಪಾದಿಸಿದ್ದಾರೆ.

ಎನ್‌ಸಿಪಿಗೆ ಮರಳುತ್ತಾರಾ ಅಜಿತ್?

ಎನ್‌ಸಿಪಿಗೆ ಮರಳುತ್ತಾರಾ ಅಜಿತ್?

ಎನ್‌ಸಿಪಿಯ 20-22 ಶಾಸಕರ ಬೆಂಬಲದಿಂದ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯಾಬಲ ಬಿಜೆಪಿಗೆ ಸಿಗುವುದಿಲ್ಲ. ಅದು ಪಕ್ಷೇತರರ ಬೆಂಬಲ ಪಡೆಯುವುದು ಅಗತ್ಯ. ಈಗಿನ ಪರಿಸ್ಥಿತಿಯಲ್ಲಿ ಅಜಿತ್ ಪವಾರ್ ಒಬ್ಬರ ಬೆಂಬಲದಿಂದ ಸರ್ಕಾರ ಉಳಿಯಲಾರದು. ಹಾಗೆಯೇ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರದ ರಚನೆಗೂ ಅಜಿತ್ ಪವಾರ್ ಬೆಂಬಲದ ಅಗತ್ಯವಿದೆ. ಅವರನ್ನು ಹೊರಗಿಟ್ಟು ಎನ್‌ಸಿಪಿ ತ್ರಿಪಕ್ಷೀಯ ಸರ್ಕಾರ ರಚನೆಗೆ ಮುಂದಾಗುವ ಸಾಧ್ಯತೆ ಕಡಿಮೆ. ಅಲ್ಲದೆ ತಮಗೆ ಇರುವ ಶಾಸಕರ ಬೆಂಬಲದಲ್ಲಿ ಅಜಿತ್ ಪವಾರ್ ಹೆಸರನ್ನು ಕೂಡ ಎನ್‌ಸಿಪಿ ಪ್ರಕಟಿಸಿದೆ. ಅಜಿತ್ ಪವಾರ್ ಸೇರಿದಂತೆ ಎಲ್ಲರನ್ನೂ ಪಕ್ಷಕ್ಕೆ ಮರಳಿ ಕರೆತರುವುದು ತಮ್ಮ ಜವಾಬ್ದಾರಿ ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ.

ಅಜಿತ್ ಪವಾರ್ ಅವರನ್ನೇ ಬೆಂಬಲಿಸುತ್ತದೆಯಾ ಎನ್‌ಸಿಪಿ?

ಅಜಿತ್ ಪವಾರ್ ಅವರನ್ನೇ ಬೆಂಬಲಿಸುತ್ತದೆಯಾ ಎನ್‌ಸಿಪಿ?

ಒಂದು ವೇಳೆ ಪಕ್ಷದ ಮನವೊಲಿಕೆಗೆ ಬಗ್ಗದೆ ಅಜಿತ್ ಪವಾರ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡರೆ ಅದು ಸಂಪೂರ್ಣ ಬಂಡಾಯದ ಸೂಚನೆಯಾಗುತ್ತದೆ. ಆಗ ಪಕ್ಷ ಅವರನ್ನು ಉಚ್ಚಾಟನೆ ಮಾಡುವ ಅನಿವಾರ್ಯತೆಗೆ ಸಿಲುಕಬಹುದು. ಕುಟುಂಬದೊಳಗಿನ ಬಿಕ್ಕಟ್ಟು ಜೋರಾಗಿ ಇದರಿಂದ ಎನ್‌ಸಿಪಿ ಇಬ್ಭಾಗವಾಗುವ ಅಪಾಯ ಇದೆ. ಹೀಗಾಗಿ ಅಜಿತ್ ಪವಾರ್ ವಿರುದ್ಧ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಇದಕ್ಕಾಗಿ ಶರದ್ ಪವಾರ್ ಎಚ್ಚರಿಕೆಯ ಹೆಜ್ಜೆ ಇರಿಸಲಿದ್ದಾರೆ ಎನ್ನಲಾಗಿದೆ. ಅಜಿತ್ ಪವಾರ್ ಅವರ ಹಠಕ್ಕೆ ಮಣಿದು ಎನ್‌ಸಿಪಿ ಕೊನೆಯ ಕ್ಷಣದಲ್ಲಿ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದರೂ ಅಚ್ಚರಿಯಿಲ್ಲ ಎಂದೂ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+