ಬಿಜೆಪಿ ಸ್ಟಾರ್ ಕ್ಯಾಂಪೇನರ್ ಯೋಗಿ ಸೋತು ಮಲಗಿಬಿಟ್ಟಿದ್ದಾರೆ: ರೈ
ಮಂಗಳೂರು, ಮಾರ್ಚ್ 16: ಉತ್ತರ ಪ್ರದೇಶದಲ್ಲಿನ ಲೋಕಸಭೆ ಉಪ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಯೋಗಿ ಆದಿತ್ಯನಾಥ್ ಮಲಗಿದ್ದು, ಇನ್ನು ಏಳುವುದು ಕಷ್ಟ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ದೇಶದಾದ್ಯಂತ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲಾಗಿದೆ. ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಆದ ಈ ಬದಲಾವಣೆ ರಾಜ್ಯದಲ್ಲಿ ಮುಂದೆ ನಡೆಯುವ ಚುನಾವಣೆಗೂ ದಿಕ್ಸೂಚಿಯಾಗಲಿದೆ. ಉತ್ತರ ಪ್ರದೇಶಕ್ಕೆ ಸಲ್ಲದವರನ್ನು ಬಿಜೆಪಿಗರು ಇಲ್ಲಿಗೆ ಕರೆತಂದು ಭಾಷಣ ಮಾಡಿಸಿದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಮುಂಬರುವ ಚುನಾವಣೆಗಾಗಿ ಸ್ಟಾರ್ ಕ್ಯಾಂಪೇನರ್ ಎಂದು ಬಿಜೆಪಿಯವರಿಂದ ಗುರುತಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಲಿನಿಂದಾಗಿ ಮಲಗಿದ್ದಾರೆ. ಇನ್ನು ಅವರು ಏಳುವುದು ಕಷ್ಟ. ಬಿಜೆಪಿಯವರು ಪರ್ಯಾಯವಾಗಿ ಬೇರೆ ಯಾರನ್ನಾದರೂ ಹುಡುಕಬೇಕು ಎಂದು ವ್ಯಂಗ್ಯವಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications