ಮೂಡುಬಿದಿರೆ ಕಾಂಗ್ರೆಸ್ ಟಿಕೆಟ್ ಪಡೆಯಲು ಗುರು-ಶಿಷ್ಯರ ಸಮರ
ಮಂಗಳೂರು, ಜೂನ್ 9: ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಮೂಡುಬಿದಿರೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಈ ಮೊದಲೇ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒಂದು ಹಂತದ ಸಿದ್ಧತೆ ಮುಗಿಸಿದ್ದು ಮೂಡುಬಿದಿರೆಯ ಕಾಂಗ್ರೆಸ್ ಟಿಕೆಟ್ ಕುತೂಹಲ ಹುಟ್ಟಿಸಿದೆ.
ಶಾಸಕ ಅಭಯಚಂದ್ರ ಜೈನ್ ಯುವಜನ ಕ್ರೀಡೆ ಮತ್ತು ಮೀನುಗಾರಿಕೆ ಸಚಿವರಾಗಿ ಮೊದಲಾರ್ಧ ಅಧಿಕಾರ ನಡೆಸಿದ ಬಳಿಕ ಸಚಿವ ಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಕೇಳಿದಾಗ ಬಿಟ್ಟು ಕೊಟ್ಟಿದ್ದರು.
[ಪ್ರಶಾಂತ್ ಪೂಜಾರಿ ಕೊಲೆ: ನಾಲ್ವರು ಖುದ್ದು ಕೋರ್ಟ್ ಗೆ ಶರಣು]
ಒಂದು ಸಂದರ್ಭದಲ್ಲಿ ಅವರು ತಾನು ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ ನನ್ನ ಸ್ಥಾನವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದರು.
ಈ ಮೂಲಕ ಮೂಡುಬಿದಿರೆಯ ಭಾವಿ ವಾರಸುದಾರ ಮಿಥುನ್ ರೈ ಎಂಬುದನ್ನು ಸೂಚ್ಯವಾಗಿ ಹೇಳಿ, ಅವರ ಪರವಾಗಿ ಬೆನ್ನು ತಟ್ಟಿದ್ದರು. ಆದರೆ ಸದ್ಯ ಅಭಯಚಂದ್ರ ಜೈನ್ ಚುನಾವಣೆ ಬರಲಿ ನೋಡೋಣ ಎನ್ನುತ್ತಿದ್ದಾರೆ. ಹೀಗಾಗಿ ಅವರಿಗೂ ಸ್ಪರ್ಧಿಸುವ ಇರಾದೆ ಇದ್ದಂತೆ ಕಾಣಿಸುತ್ತಿದೆ.
[ವರ್ಷಾಂತ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಪಟ್ಟಾಭಿಷೇಕ]
ಇಲ್ಲಿಯವರೆಗೆ ಮೂಡುಬಿದಿರೆಯಲ್ಲಿ ಬಿಜೆಪಿ ಗೆದ್ದ ಉದಾಹರಣೆ ಇಲ್ಲ. ಜತೆಗೆ ಇಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಹೀಗಾಗಿ ಇಲ್ಲಿ ಟಿಕೆಟ್ ಭಾರೀ ಬೇಡಿಕೆ ಪಡೆದಿದೆ.

ಮೇಲ್ಮನೆಯಿಂದ ಕೆಳಮನೆಗೆ ಕಸರತ್ತು
ಐವನ್ ಡಿಸೋಜ ಮಂಗಳೂರು ದಕ್ಷಿಣದಲ್ಲಿ ಈ ಹಿಂದೆ ಸೋತ ಕಾರಣ ಕಳೆದ ಬಾರಿ ಟಿಕೆಟ್ ಸಿಗದೆ ಕಾಂಗ್ರೆಸ್‌ನಿಂದ ಜೆ.ಆರ್.ಲೋಬೊ ಸ್ಪರ್ಧಿಸಿ ಗೆದ್ದಿದ್ದರು. ಸಿಎಂ ಸಿದ್ದರಾಮಯ್ಯ ಅವರ ಜತೆ ಐವನ್ 3 ದಶಕಗಳ ಕಾಲ ಸ್ನೇಹ ಸಂಪರ್ಕ ಹೊಂದಿರುವ ಪರಿಣಾಮ ವಿಧಾನ ಪರಿಷತ್ ಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದರು. ಕೊನೆಗೆ ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿಯೂ ನೇಮಕವಾಗಿ ಗೂಟದ ಕಾರು ಪಡೆದರು.
ಇದೀಗ ಮೇಲ್ಮನೆಯಿಂದ ಕೆಳಮನೆಗೆ ಹಾರಲು ಅವರು ಹೊರಟಿದ್ದಾರೆ.

ಗುರು-ಶಿಷ್ಯರ ಫೈಟ್
ವಿಶೇಷ ಎಂದರೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ವತಃ ಐವನ್ ಡಿಸೋಜ ಪಾಳಯದ ಶಿಷ್ಯರೇ. ಯುವ ಕಾಂಗ್ರೆಸ್‌ನಲ್ಲಿ ಅವರನ್ನು ಬೆನ್ನು ತಟ್ಟಿ ಬೆಳೆಸಿದ್ದೂ ಕೂಡಾ ಇದೇ ಐವನ್. ಮಿಥುನ್ ರೈ ರಾಜಕೀಯವಾಗಿ ಬೆಳೆದು ಪ್ರಭಾವಶಾಲಿಯಾಗಿ ಈಗ ಗುರುವಿನ ಜತೆಯೇ ಟಿಕೆಟ್‌ಗೆ ಸ್ಪರ್ಧೆಯಲ್ಲಿದ್ದಾರೆ.

ಡಿಕೆಶಿ ವರ್ಸಸ್ ಸಿದ್ದರಾಮಯ್ಯ
ಐವನ್ ಡಿಸೋಜ ಅವರಿಗೆ ಜನತಾ ಪರಿವಾರದಲ್ಲಿ ಜತೆಯಾಗಿದ್ದ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಇದೆ. ಇನ್ನು ಮಿಥುನ್ ರೈಗೆ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಇಬ್ಬರು ಪ್ರಭಾವಿಗಳು ಟಿಕೆಟ್ ಪಡೆಯುವ ಕದನವೇ ಕುತೂಹಲ ಮೂಡಿಸಿದೆ.
ಮಿಥುನ್ ರೈ ಅವರು ಪ್ರತಿ ದಿನ ಮೂಡುಬಿದಿರೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲೇ ಮನೆಯನ್ನೂ ಮಾಡಿದ್ದಾರೆ. ಎಡೆಬಿಡದೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಭಯಚಂದ್ರ ಜೈನ್ ಅವರಿಂದಲೂ ತಮ್ಮ ಹೆಸರನ್ನು ಹೇಳಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಅಡ್ಡಿಯಾಗ್ತಾರಾ ಮುಖ್ಯಮಂತ್ರಿಗಳ ಸಲಹೆಗಾರ
ಇನ್ನು ಇದೇ ಮೂಡುಬಿದಿರೆಯಿಂದ ಸ್ಪರ್ಧಿಸಲು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕೂಡಾ ಆಸಕ್ತರಾಗಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡಿತ್ತು. ಅವರೂ ವೇದಿಕೆಯೊಂದರಲ್ಲಿ 'ನಾನು ಮೂಡುಬಿದಿರೆಯಿಂದ ಸ್ಪರ್ಧಿಸುತ್ತೇನೆ' ಎಂದು ಹೇಳಿದ್ದರು. ಮಂಗಳೂರಿನ ಹಿರಿಯ ಕಾಂಗ್ರೆಸ್ ರಾಜಕಾರಣಿಗಳೂ ಮಟ್ಟು ಟಿಕೆಟ್ ರೇಸ್ ನಲ್ಲಿದ್ದಾರೆ ಎಂದು ಹೇಳಿದ್ದರು. ಸದ್ಯ ಅವರಿಗೆ ಸ್ಪರ್ಧಿಸುವ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ.
ಇನ್ನು ಇತ್ತೀಚೆಗೆ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆ ವಿಧಾನಸಭೆ ಚುನಾವಣೆ ಹಣಾಹಣಿಯನ್ನು ಮೀರಿಸಿತ್ತು. ಇದರಲ್ಲಿ ಗೆದ್ದ ಮಿಥುನ್ ರೈ ಈಗ ಮೂಡುಬಿದಿರೆ ಟಿಕೆಟ್‌ಗಾಗಿ ನಡೆದ ಯುದ್ಧವನ್ನು ಗೆಲ್ಲಬೇಕಿದೆ.

ಕ್ರೈಸ್ತರಿಗೆ 2 ಟಿಕೆಟ್ ಕಷ್ಟ
ಕಳೆದ ಚುನಾವಣೆಯಲ್ಲಿ ಮಂಗಳೂರಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಅವೆಲ್ಲವೂ ಅಲ್ಪಸಂಖ್ಯಾತರೇ ಎಂಬುದು ವಿಶೇಷ. ಮೊಯ್ದಿನ್ ಬಾವಾ ಮತ್ತು ಯುಟಿ ಕಾದರ್ ಮುಸ್ಲಿಂ ಧರ್ಮಕ್ಕೆ ಸೇರಿದವರಾದರೆ, ಜೆ.ಆರ್ ಲೋಬೋ ಕ್ರೈಸ್ತರು. ಇನ್ನು ಮೂಡುಬಿದಿರೆಯಲ್ಲಿ ಗೆದ್ದಿದ್ದು ಜೈನ್ ಸಮುದಾಯದ ಅಭಯಚಂದ್ರ ಜೈನ್.
ಈಗಾಗಲೇ ಮಂಗಳೂರು ದಕ್ಷಿಣದಲ್ಲಿ ಕ್ರೈಸ್ತ ಕೋಟಾದಲ್ಲಿ ಜೆ.ಆರ್.ಲೋಬೊ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಇನ್ನೊಂದು ಕ್ಷೇತ್ರ ಮೂಡುಬಿದರೆಗೂ ಕ್ರೈಸ್ತ ಅಭ್ಯರ್ಥಿಗೆ ಕಾಂಗ್ರೆಸ್ ಅವಕಾಶ ನೀಡುವುದೇ ಎನ್ನುವುದು ಸದ್ಯದ ಪ್ರಶ್ನೆ.












Click it and Unblock the Notifications