7 ಸಾವಿರ ಚದರಡಿಯ ಐಷಾರಾಮಿ ಮನೆ! ನಿಖಿಲ್ ಕಾಮತ್ ಬೆಂಗಳೂರಿನ ಕನಸಿನ ಮನೆಯೊಳಗೆ ಒಂದು ಸುತ್ತು
ಜೆರೋಧಾ ಕಂಪನಿ ಸ್ಥಾಪಕ, ಅಪ್ಪಟ ಕನ್ನಡಿಗ ನಿಖಿಲ್ ಕಾಮತ್ ನಿಮಗೆ ಗೊತ್ತಲ್ಲವೇ. ಇದು ಅವರ ಮನೆ ಅಲಿಯಾಸ್ ಅರಮನೆಯ ವಿಷ್ಯ. ಬರೋಬ್ಬರಿ 7 ಸಾವಿರ ಚದರ ಅಡಿ ವಿಸ್ತೀರ್ಣ, ಕಣ್ಣಿಗೆ ಹಬ್ಬದಂತಿರುವ ನಗರ ನೋಟ, ಪ್ರಕೃತಿಯೊಂದಿಗೆ ಬೆಸೆದ ವಿನ್ಯಾಸ, ಐಷಾರಾಮಿ ಸೌಲಭ್ಯಗಳ ನಡುವೆಯೂ ಸರಳತೆಯ ಸ್ಪರ್ಶ - ಇವುಗಳೆಲ್ಲ ಸೇರಿ ಭಾರತದ ಯುವ ಉದ್ಯಮಿ ನಿಖಿಲ್ ಕಾಮತ್ ಅವರ ಬೆಂಗಳೂರಿನ ಮನೆಗೆ ವಿಶೇಷ ಗುರುತನ್ನು ತಂದುಕೊಟ್ಟಿವೆ.
ಭಾರತದ ಅತಿದೊಡ್ಡ ರೀಟೇಲ್ ಸ್ಟಾಕ್ ಬ್ರೋಕರೇಜ್ ವೇದಿಕೆಯಾದ ಜೆರೋಧಾ ಸಂಸ್ಥೆಯ ಸಹ-ಸಂಸ್ಥಾಪಕರಾಗಿ ಹೆಸರು ಮಾಡಿದ ನಿಖಿಲ್ ಕಾಮತ್, ಹೂಡಿಕೆ, ಸ್ಟಾರ್ಟ್‌ಅಪ್, ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಜೀವನಶೈಲಿಯ ವಿಚಾರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಈಗ ಅವರ ಯಶಸ್ಸಿನ ಕಥೆಯಷ್ಟೇ ಅಲ್ಲ, ಬೆಂಗಳೂರಿನಲ್ಲಿರುವ ಅವರ ಮನೆ ಕೂಡ ಜನರ ಗಮನ ಸೆಳೆಯುತ್ತಿದೆ.

ಐಷಾರಾಮಿ ಟವರ್‌ನಲ್ಲಿ ಕನಸಿನ ಮನೆ
ನಿಖಿಲ್ ಕಾಮತ್ ಅವರ ನಿವಾಸವು ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಐಷಾರಾಮಿ ವಸತಿ ಸಮುಚ್ಚಯಗಳಲ್ಲಿ ಒಂದಾದ ʼಕಿಂಗ್‌ಫಿಷರ್ ಟವರ್ಸ್ʼನಲ್ಲಿ ಇದೆ. ಉದ್ಯಮಿಗಳು, ಗಣ್ಯರು ಹಾಗೂ ಶ್ರೀಮಂತರು ವಾಸಿಸುವ ಈ ಟವರ್, ಖಾಸಗಿತನ, ಭದ್ರತೆ ಮತ್ತು ನಗರದ ಅದ್ಭುತ ನೋಟಕ್ಕಾಗಿ ಪ್ರಸಿದ್ಧವಾಗಿದೆ.
ಮನೆಯ ಕಿಟಕಿಯಿಂದ ಬೆಂಗಳೂರಿನ ಸ್ಕೈಲೈನ್ ಸಂಪೂರ್ಣವಾಗಿ ಕಾಣುತ್ತದೆ. ದಿನದ ಬೆಳಕು ಮತ್ತು ರಾತ್ರಿ ಮಿನುಗುವ ನಗರದ ದೃಶ್ಯ ಮನೆಗೆ ಮತ್ತಷ್ಟು ಸೊಬಗು ನೀಡುತ್ತದೆ. ಕಿಟಕಿಗಳು ಹೆಚ್ಚು ಇವೆ ಹಾಗೂ ಓಪನ್ ಇವೆ. ಹೊರಗಿನ ನೋಟಕ್ಕೆ ಆದ್ಯತೆ. ಅತಿಯಾದ ಆಡಂಬರಕ್ಕಿಂತ ಉತ್ತಮ ಗುಣಮಟ್ಟ ಮತ್ತು ಸೂಕ್ಷ್ಮ ವಿನ್ಯಾಸವೇ ಇಲ್ಲಿ ಐಷಾರಾಮಿತನವನ್ನು ಪ್ರತಿಬಿಂಬಿಸುತ್ತದೆ.

7 ಸಾವಿರ ಚದರ ಅಡಿ ವಿಶಾಲ ಮನೆ
ಸುಮಾರು 7,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಪ್ರತಿಯೊಂದು ಕೋಣೆಯೂ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಅನಗತ್ಯ ಅಲಂಕಾರಕ್ಕಿಂತ ತೆರವಾದ ಜಾಗ, ಆರಾಮದಾಯಕ ವಾತಾವರಣ ಮತ್ತು ಉಪಯುಕ್ತತೆಯ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಮನೆಯಲ್ಲಿ ಕಾಲಿಟ್ಟ ತಕ್ಷಣವೇ ವಿಶಾಲತೆ ಹಾಗೂ ಶಾಂತ ವಾತಾವರಣ ಅನುಭವವಾಗುವಂತೆ ವಿನ್ಯಾಸ ಮಾಡಲಾಗಿದೆ.
ಮನೆಯ ಒಳಾಂಗಣ ವಿನ್ಯಾಸದಲ್ಲಿ ಮೃದುವಾದ ಬಣ್ಣಗಳು, ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಮರದ ಅಲಂಕಾರ, ಆಯ್ದ ಕಲಾಕೃತಿಗಳು ಮತ್ತು ಆಧುನಿಕ ಶೈಲಿಯ ಅಲಂಕಾರ ಬಳಸಲಾಗಿದೆ. ದೊಡ್ಡ ಗಾತ್ರದ ಕಿಟಕಿಗಳಿಂದ ಸಾಕಷ್ಟು ನೈಸರ್ಗಿಕ ಬೆಳಕು ಮನೆಯೊಳಗೆ ಹರಿದು ಬರುತ್ತದೆ. ಇದರಿಂದ ಮನೆ ಹೆಚ್ಚು ಪ್ರಕಾಶಮಾನವಾಗಿ ಮತ್ತು ಗಾಳಿಯಾಡುವಂತಿರುತ್ತದೆ.

ಪ್ರಕೃತಿಯೊಂದಿಗಿನ ನಂಟೇ ವಿಶೇಷ
ನಿಖಿಲ್ ಕಾಮತ್ ಅವರ ಮನೆಯ ಪ್ರಮುಖ ವಿಶೇಷತೆ ಎಂದರೆ ಪ್ರಕೃತಿಯೊಂದಿಗಿನ ಅದರ ನಂಟು. ಅವರ ತಾಯಿ ರೇವತಿ ಕಾಮತ್ ಪರಿಸರ ಸ್ನೇಹಿ ವಾಸ್ತು ವಿನ್ಯಾಸದ ಪರವಾಗಿದ್ದು, ಅದರ ಪ್ರಭಾವ ಈ ಮನೆಯಲ್ಲೂ ಸ್ಪಷ್ಟವಾಗಿ ಕಾಣುತ್ತದೆ.
ಮನೆಯ ವಿವಿಧ ಭಾಗಗಳಲ್ಲಿ ಹಸಿರು ಸಸ್ಯಗಳು, ನೈಸರ್ಗಿಕ ವಸ್ತುಗಳ ಬಳಕೆ, ತೆರೆದ ಸ್ಥಳಗಳು ಹಾಗೂ ಒಳಾಂಗಣ ಮತ್ತು ಹೊರಾಂಗಣದ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ನಗರದ ಮಧ್ಯದಲ್ಲೇ ಪ್ರಕೃತಿಯ ಮಡಿಲಲ್ಲಿರುವ ಅನುಭವ ಸಿಗುತ್ತದೆ.

ಪ್ರತಿಯೊಂದು ಕಿಟಕಿಯೂ ಒಂದು ಚಿತ್ರ
ನೆಲದಿಂದ ಮೇಲ್ಛಾವಣಿವರೆಗೂ ಇರುವ ಗಾಜಿನ ಕಿಟಕಿಗಳು ಮನೆಯ ಮತ್ತೊಂದು ಆಕರ್ಷಣೆ. ಇವು ಕೇವಲ ಬೆಳಕು ಮಾತ್ರವಲ್ಲ, ಬೆಂಗಳೂರಿನ ಸುಂದರ ನಗರ ನೋಟವನ್ನು ಮನೆಯೊಳಗೆ ತರುತ್ತವೆ. ಹಗಲಿನಲ್ಲಿ ನೈಸರ್ಗಿಕ ಬೆಳಕು ಮತ್ತು ರಾತ್ರಿ ನಗರದ ಬೆಳಕುಗಳು ಮನೆಗೆ ವಿಭಿನ್ನ ಸೊಬಗನ್ನು ನೀಡುತ್ತವೆ.
ನಿಖಿಲ್ ಕಾಮತ್ ಅವರ ಮನೆ ಅವರ ಜೀವನದ ತತ್ವವನ್ನು ಪ್ರತಿಬಿಂಬಿಸುವ ಸ್ಥಳ ಅನ್ನಬಹುದು. ಸರಳತೆ, ಉಪಯುಕ್ತತೆ, ಪರಿಸರದ ಬಗ್ಗೆ ಕಾಳಜಿ ಹಾಗೂ ಆಧುನಿಕ ಜೀವನಶೈಲಿಯನ್ನು ಸಮತೋಲನಗೊಳಿಸುವ ಪ್ರಯತ್ನ ಈ ಮನೆಯ ಪ್ರತಿಯೊಂದು ಭಾಗದಲ್ಲೂ ಗೋಚರಿಸುತ್ತದೆ.

ಇಂದಿನ ದಿನಗಳಲ್ಲಿ ಐಷಾರಾಮಿ ಮನೆ ಎಂದರೆ ಕೇವಲ ದುಬಾರಿ ಇಂಟೀರಿಯರ್ ಅಥವಾ ಭವ್ಯ ಕಟ್ಟಡವಲ್ಲ. ಪರಿಸರ ಸ್ನೇಹಿ ವಿನ್ಯಾಸ, ನೈಸರ್ಗಿಕ ಬೆಳಕಿನ ಬಳಕೆ, ಹಸಿರು ವಾತಾವರಣ ಹಾಗೂ ಉದ್ದೇಶಪೂರಿತ ಜೀವನಶೈಲಿಯೂ ಅಷ್ಟೇ ಮುಖ್ಯ ಎಂಬುದನ್ನು ನಿಖಿಲ್ ಕಾಮತ್ ಅವರ ಮನೆ ತೋರಿಸುತ್ತದೆ. ಆಧುನಿಕತೆ, ಆರಾಮ, ಪರಿಸರ ಸಂರಕ್ಷಣೆ ಮತ್ತು ಸರಳತೆಯನ್ನು ಒಂದೇ ಸೂರಿನಡಿ ಬೆಸೆಯುವ ನಿವಾಸವಿದು.
(ಬರಹ: ಭವಾನಿ ಭಟ್)















Click it and Unblock the Notifications