ಗರ್ಭಿಣಿ ಪ್ರಿಯತಮೆಯನ್ನು ನದಿಗೆ ತಳ್ಳಿದ ಭೂಪ
ಮಂಗಳೂರು, ಸೆ. 10 : ಪ್ರೀತಿಸಿದ ಯುವತಿ ಗರ್ಭಿಣಿಯಾದ್ದರಿಂದ ಆತಂಕಗೊಂಡ ಪ್ರಿಯಕರ ಆಕೆಯನ್ನು ಕುಮಾರಧಾರಾ ನದಿಗೆ ತಳ್ಳಿದ ಪ್ರಕರಣ ಪುತ್ತೂರಿನಲ್ಲಿ ನಡೆದಿದೆ. ನದಿಯಲ್ಲಿ ತೇಲಿಕೊಂಡ ಹೋದ ಯುವತಿ ನಂತರ ಮರವನ್ನು ಹಿಡಿದುಕೊಂಡು ಬದುಕಿ ಬಂದಿದ್ದಾಳೆ. ಪ್ರಿಯತಮೆ ಬದುಕಿ ಬಂದ ತಕ್ಷಣ ಪ್ರಿಯಕರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಿಯತಮೆಯನ್ನು ನೀರಿಗೆ ತಳ್ಳಿದ ವ್ಯಕ್ತಿಯನ್ನು ಆನಂದ್ ಎಂದು ಗುರುತಿಸಲಾಗಿದ್ದು, ಪುತ್ತೂರಿನ ಅಂಗಡಿಗುಡ್ಡೆ ನಿವಾಸಿ ಎಂದು ತಿಳಿದುಬಂದಿದೆ. ಪ್ರಿಯತಮೆ ಪದ್ಮಾವತಿಯನ್ನು ಗರ್ಭಪಾತ ಮಾಡಿಸುವ ನೆಪದಲ್ಲಿ ಕರೆದುಕೊಂಡು ಹೋದ ಆತ ಸೋಮವಾರ ಸಂಜೆ ತುಂಬಿ ಹರಿಯುತ್ತಿದ್ದ ಕುಮಾರಧಾರಾ ನದಿಗೆ ತಳ್ಳಿದ್ದಾನೆ.

ನೀರಿನಲ್ಲಿ ಸುಮಾರು 4 ಕಿ.ಮೀ.ತೇಲಿಕೊಂಡು ಹೋಗಿದ್ದ ಪದ್ಮಾವತಿ ನಂತರ ಚಿಕ್ಕ ದ್ವೀಪದ ಬಳಿ ಮರವೊಂದನ್ನು ಹಿಡಿದುಕೊಂಡು ಅಲ್ಲಿಯೇ ರಾತ್ರಿ ಕಳೆದಿದ್ದಾಳೆ. ಮಂಗಳವಾರ ಬೆಳಗ್ಗೆ ಮೀನು ಹಿಡಿಯಲು ಬಂದವರು, ಆಕೆಯನ್ನು ರಕ್ಷಿಸಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ನಂತರ ಆಕೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ವಿವರ : ಪದ್ಮಾವತಿ ಅವರ ತಂದೆ ತಮ್ಮ ಸಂಬಂಧಿಕ ಆನಂದ್‌ಗೆ ಅವರ ಮನೆಯಲ್ಲಿಯೇ ಆಶ್ರಯ ನೀಡಿದ್ದರು. ಪದ್ಮಾವತಿಯನ್ನು ಪ್ರೀತಿಸುತ್ತಿದ್ದ ಆನಂದ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ, ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಆನಂದ್ ಒಪ್ಪುತ್ತಿರಲಿಲ್ಲ. ಪ್ರಿಯತೆಮ ಗರ್ಭಿಣಿಯಾದ್ದರಿಂದ ಆಕೆಯನ್ನು ಮದುವೆಯಾಗಬೇಕಾಗುತ್ತದೆ ಎಂದು ಆಕೆಯ ಕೊಲೆಗೆ ಸಂಚು ರೂಪಿಸಿದ್ದ.

ಸೋಮವಾರ ಸಂಜೆ ಪದ್ಮಾವತಿಯನ್ನು ಗರ್ಭಪಾತ ಮಾಡಿಸಲು ಕರೆದುಕೊಂಡು ಹೋಗಿದ್ದ ಆತ ಕುಮಾರಧಾರ ನದಿಯ ಬಳಿ ಬಂದಾಗ ಆಕೆಯನ್ನು ನದಿಗೆ ತಳ್ಳಿದ್ದ. ನದಿಗೆ ಬಿದ್ದ ಪದ್ಮಾವತಿ ಸುಮಾರು ನಾಲ್ಕು ಕಿ.ಮೀ. ತೇಲಿಕೊಂಡು ಹೋಗಿ ನಂತರ ಚಿಕ್ಕ ದ್ವೀಪದಲ್ಲಿ ಮರವನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಳು. ಆದರೆ, ಕತ್ತಲಾಗಿದ್ದರಿಂದ ಅಂದು ಅಲ್ಲಿಗೆ ಯಾರೂ ಆಗಮಿಸಿದ ಕಾರಣ ಪದ್ಮಾವತಿ ಅಲ್ಲಿಯೇ ರಾತ್ರಿ ಕಳೆದಿದ್ದಾಳೆ.
ಮಂಗಳವಾರ ನದಿಯಲ್ಲಿ ಮೀನುಗಾರರನ್ನು ಕಂಡ ಪದ್ಮಾವತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಪದ್ಮಾವತಿ ಇದ್ದ ಸ್ಥಳದಲ್ಲಿ ಮೊದಲು ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ದೆವ್ವವಿರಬಹುದು ಎಂದು ಶಂಕಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಲು ವಿಳಂಬ ಮಾಡಿದರು. ನಂತರ ಹತ್ತಿರ ಹೋಗಿ ನೋಡಿದಾಗ ಯುವತಿ ಇರುವುದು ಧೃಡಪಟ್ಟಿದೆ.
ನಂತರ ಆಕೆಯನ್ನು ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪದ್ಮಾವತಿ ಬದುಕಿರುವ ವಿಷಯ ತಿಳಿದ ಆನಂದ್ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪದ್ಮಾವತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications