ಕ್ರಿಕೆಟರ್ ಜಾಂಟಿ ರೋಡ್ಸ್ ಶುಭ ಕೋರಿದ ತಾನ್ವಿ ಸಾಧನೆ ಸಾಮಾನ್ಯದ್ದಲ್ಲ
ಮಂಗಳೂರು, ಆಗಸ್ಟ್ 30: ಕಡಲ ನಗರಿಯ ಯುವ ಸರ್ಫಿಂಗ್ ಪಟು ತಾನ್ವಿ ಜಗದೀಶ್ ಡೆನ್ಮಾರ್ಕ್ ನಲ್ಲಿ ನಡೆಯುವ ಸರ್ಫಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ತಾನ್ವಿ ಅವರಿಗೆ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಜಾಂಟಿ ರೋಡ್ಸ್ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಶುಭ ಹಾರೈಸಿದ ಸುದ್ದಿ ಸದ್ಯ ವೈರಲ್ ಆಗಿದೆ.
ಜಾಂಟಿ ರೋಡ್ಸ್ ಶುಭ ಹಾರೈಕೆಗೆ ತಾನ್ವಿ ಅವರು ಖುಷಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ. ಮೂಲತಃ ಪುತ್ತೂರಿನವರಾದ ತಾನ್ವಿ ಜಗದೀಶ್ ತನ್ನ 10ನೇ ವಯಸ್ಸಿನಲ್ಲಿಯೇ ಸರ್ಫಿಂಗ್ ಕ್ರೀಡೆಯನ್ನು ಆರಂಭಿಸಿದ್ದರು. ಶಾರದಾ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಇವರು ಮೂಲ್ಕಿಯ ಖ್ಯಾತ ಸರ್ಫಿಂಗ್ ಅಕಾಡೆಮಿ ಮಂತ್ರ ಸರ್ಫ್ ಕ್ಲಬ್ ಮೂಲಕ ಕ್ರೀಡಾ ಜೀವನ ಆರಂಭಿಸಿದರು.
ಡೆನ್ಮಾರ್ಕ್ ನಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯುವ ಸ್ಟ್ಯಾಂಡ್ ಅಪ್ ಪೆಡಲರ್ ಚಾಂಪಿಯನ್ ಶಿಪ್ ನಲ್ಲಿ ಆಕೆ ಭಾಗವಹಿಸುತ್ತಿದ್ದಾರೆ. ಈ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಾನ್ವಿ ಹೇಳಿಕೊಂಡಿದ್ದಾರೆ. ಇದಕ್ಕೆ ಸಾವಿರಾರು ಜನರು ಶುಭ ಹಾರೈಸಿದ್ದಾರೆ.

ಫಲಿತಾಂಶದ ಬಗ್ಗೆ ಚಿಂತಿಸದೇ ಭಾಗವಹಿಸು
ಆ ಪೈಕಿ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ತಾರೆ ಜಾಂಟಿ ರೋಡ್ಸ್ ಕೂಡ ಒಬ್ಬರು. ಕ್ರಿಕೆಟ್ ಜಗತ್ತು ಕಂಡ ಅದ್ಭುತ ಫಿಲ್ಡರ್ ಜಾಂಟಿ ರೋಡ್ಸ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. "ನೀನು ಫಲಿತಾಂಶದ ಬಗ್ಗೆ ಚಿಂತಿಸದೇ ಭಾಗವಹಿಸು, ಗೆಲುವು ನಿನ್ನದೇ. ನೀನು ಉತ್ತಮ ಸರ್ಫಿಂಗ್ ಪಟು. ನಿನ್ನ ಬಗ್ಗೆ ಹೆಮ್ಮೆ ಇದೆ" ಎಂದು ಕಾಮೆಂಟ್ ಹಾಕಿದ್ದಾರೆ. ಸದ್ಯ ಇದು ವೈರಲ್ ಆಗಿದೆ.

ಮೊದಲ ಭಾರತೀಯ ಯುವತಿ
2017ರ ಏಪ್ರಿಲ್ 19ರಂದು ಯುಎಸ್‍ಎನಲ್ಲಿ ನಡೆದ ಪಶ್ಚಿಮ ಮರೀನಾ ಕ್ಯಾರೋಲಿನಾ ಕಪ್ ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಯುವತಿ ಎಂಬ ಅಗ್ಗಳಿಕೆ ಪಡೆದಿದ್ದಾರೆ ತಾನ್ವಿ. ಈ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಜಿಲ್ಲಾಡಳಿತದಿಂದ ಆರ್ಥಿಕ ಸಹಾಯ
ಕಳೆದ ವರ್ಷ ಫಿಜಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲರ್ ಚಾಂಪಿಯನ್ ಶಿಪ್ ನಲ್ಲಿ ತಾನ್ವಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ವಿಶ್ವದ 26 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈಕೆಗೆ ಆರ್ಥಿಕ ಸಹಾಯ ಮಾಡುವ ಮೂಲಕ ಸಾಧನೆಗೆ ಪ್ರೋತ್ಸಾಹಿಸಿತ್ತು.
ತಾನ್ವಿ ಸರ್ಫಿಂಗ್ ಕಲಿಯುವುದಷ್ಟೇ ಅಲ್ಲದೇ ಸುರತ್ಕಲ್ ನ ಎನ್ ಐಟಿಕೆಯಲ್ಲಿ ಕಲಿಯುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸರ್ಫಿಂಗ್ ಕಲಿಸುತ್ತಿದ್ದಾರೆ.

ನನ್ನ ಜೀವನದ ಬಹುಮುಖ್ಯ ಘಟ್ಟ
"ನನಗೆ ನೀರು ಅಂದರೆ ತುಂಬಾ ಖುಷಿ, ನೀರಿನ ಬಗ್ಗೆ ಯಾವುದೇ ಭಯ ಇಲ್ಲ. ಯಾಕೆಂದರೆ ನಾನು ಸಮುದ್ರವನ್ನು ಪ್ರೀತಿಸುತ್ತೇನೆ. ಡೆನ್ಮಾರ್ಕ್ ನಲ್ಲಿ ನಡೆಯುವ ಚಾಂಪಿಯನ್ ಶಿಪ್ ನನ್ನ ಜೀವನದ ಬಹುಮುಖ್ಯ ಘಟ್ಟ. ಇದರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಹೆಮ್ಮ ಇದೆ" ಎಂದು ಒನ್ಇಂಡಿಯಾ ಕನ್ನಡಕ್ಕೆ ತನ್ನ ಖುಷಿ ಹಂಚಿಕೊಂಡರು 17ರ ಹರೆಯದ ತಾನ್ವಿ ಜಗದೀಶ್.












Click it and Unblock the Notifications