ಮಂಗಳೂರು : ಕನಿಷ್ಠ ಆಟೋ ಪ್ರಯಾಣದರ 23 ರೂ.
ಮಂಗಳೂರು, ಮಾ.2 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ದರದ ಬಗ್ಗೆ ಎದ್ದಿದ್ದ ಗೊಂದಲ ಬಗೆಹರಿದಿದೆ. ಆಟೋ ರಿಕ್ಷಾಗಳ ದರಗಳನ್ನು ಮಾ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಕನಿಷ್ಠ ಪ್ರಯಾಣ ದರ 23 ರೂ. ಆಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಆದೇಶ ಹೊರಡಿಸಿದ್ದು ಮೊದಲ 1.5 ಕಿ.ಮೀ.ಗಳಿಗೆ 23 ರೂ., ಅನಂತರದ ಪ್ರತಿ ಕಿ.ಮೀ.ಗೆ 13 ರೂ. ಎಂದು ದರ ನಿಗದಿ ಮಾಡಿದೆ. ಇದರಿಂದ ಆಟೋ ದರದ ಬಗ್ಗೆ ಎದ್ದಿದ್ದ ಗೊಂದಲಗಳು ಬಗೆಹರಿದಿವೆ. [ಮಂಗಳೂರು : ರಸ್ತೆಗಿಳಿಯದ ಆಟೋಗಳು]

ನೂತನ ದರಪಟ್ಟಿಯ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪ್ರಯಾಣದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಆಟೋ ಚಾಲಕರು ದರ ಪಟ್ಟಿಯನ್ನು ರಿಕ್ಷಾಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚನೆ ನೀಡಲಾಗಿದೆ. [ಮಂಗಳೂರು : ಆಟೋ ದರ ಇಳಿಕೆ, ಡಿಸಿ ಸಮರ್ಥನೆ]
ದರ ಪಟ್ಟಿಯ ಜೊತೆಗೆ ಚಾಲಕನ ಭಾವಚಿತ್ರವುಳ್ಳ ಪರವಾನಿಗೆ, ಮೊಬೈಲ್ ಸಂಖ್ಯೆಯನ್ನು ಚಾಲಕನ ಸೀಟಿನ ಹಿಂಬದಿ ಲಗತ್ತಿಸಬೇಕು. ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನಿರ್ದೇಶನ ನೀಡಿದ್ದಾರೆ. [ಆಟೋದಲ್ಲಿ ಹೆಚ್ಚು ದರ ಕೇಳಿದರೆ ಮೆಸೇಜ್ ಮಾಡಿ]
ಕನಿಷ್ಠ 25 ರೂ. ಇದ್ದ ಪ್ರಯಾಣದರವನ್ನು ಇತ್ತೀಚೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 20 ರೂ.ಗೆ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇದನ್ನು ವಿರೋಧಿಸಿ ಆಟೋ ರಿಕ್ಷಾ ಚಾಲಕರು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಆಟೋ ಚಾಲಕರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದರು. ದರ ಪರಿಷ್ಕರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರ ಅನ್ವಯ 23ರೂ. ದರ ನಿಗದಿಪಡಿಸಲಾಗಿದೆ.












Click it and Unblock the Notifications