ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಆರೋಪಿಗಳ ಪತ್ತೆಗೆ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ NIA
ಮಂಗಳೂರು, ಅಕ್ಟೋಬರ್, 27: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಿದರೆ ನಗದು ಬಹುಮಾನ ನೀಡುವುದಾಗಿ NIA ಘೋಷಣೆ ಮಾಡಿದೆ.
ಆರೋಪಿ ನಂ. 23 ಸೋಮವಾರಪೇಟೆ ತಾಲೂಕಿನ ಕಲಕಂದೂರ್ ಗ್ರಾಮದ ನಿವಾಸಿ ನೌಷಾದ್, ಆರೋಪಿ ನಂ.22 ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ ಅಬ್ದುಲ್ ನಾಸೀರ್ ಮತ್ತು ಆರೋಪಿ ನಂ.24 ಸೋಮವಾರಪೇಟೆ ತಾಲೂಕಿನ ಕಲಕಂದೂರ್ ಗ್ರಾಮದ ನಿವಾಸಿ ಅಬ್ದುಲ್ ರಹಮಾನ್ ಸೇರಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿದವರಿಗೆ ತಲಾ 2 ಲಕ್ಷ ಬಹುಮಾನ ಕೋಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ.

ಇನ್ನು ಈ ಮೂವರು ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರಾಗಿದ್ದರು. ಈ ಹಿಂದೆ ಎನ್‌ಐಎ ಅಧಿಕಾರಿಗಳು ನೌಷಾದ್ ಮನೆ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದ್ದರು. ಇದೀಗ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 2 ಲಕ್ಷ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದೆ.
ಹಾಗೆಯೇ ಅಕ್ಟೋಬರ್ 4ರಂದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಿರಾಕರಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ್ ಶಾಸ್ತ್ರಿ, ನ್ಯಾ. ಅನಿಲ್ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠವು, ಈ ಹತ್ಯೆ ಸಂಬಂಧ ಸಂಚಿನಲ್ಲಿ ಆರೋಪಿಗಳು ಭಾಗಿಯಾದ ಆರೋಪವಿದೆ. ಆದ್ದರಿಂದ ಆರೋಪಿ ನಂ. 9 ಕೆ.ಇಸ್ಮಾಯಿಲ್ ಶಫಿ, ಆರೋಪಿ ನಂ.10 ಕೆ.ಮೊಹಮ್ಮದ್ ಇಕ್ಬಾಲ್ ಹಾಗೂ ಆರೋಪಿ. 11 ಎಂ.ಶಾಹೀದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿ ಆದೇಶ ಹೊರಡಿಸಿತ್ತು.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು, ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಬಳಿಕ ದುಷ್ಕರ್ಮಿಗಳು ವಿವಿಧ ಕಡೆಗಳಿಗೆ ಕಣ್ತಪ್ಪಿಸಿಕೊಂಡಿದ್ದರು.












Click it and Unblock the Notifications