ಅಡ್ಡಿಯಾದ ಬಡತನ;ಹಿಂದೂ ಯುವತಿಯ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ
ಮಂಗಳೂರು, ಮಾರ್ಚ್ 20: ದಕ್ಷಿಣ ಕನ್ನಡ ಜಿಲ್ಲೆಯನ್ನು ಇತ್ತೀಚಿನ ವರ್ಷಗಳಲ್ಲಿ ಕೋಮು ಸೂಕ್ಷ್ಮ ಜಿಲ್ಲೆ ಎಂದೇ ಗುರುತಿಸಲಾಗುತ್ತಿದೆ.ಅದರಲ್ಲೂ ಮಂಗಳೂರು ಕೋಮು ಘರ್ಷಣೆಯಿಂದಲೇ ಸುದ್ದಿಯಾಗಿದೆ. ಆದರೆ ಈ ನಡವೆ ಅಪರೂಪದ ಸೌಹಾರ್ದತೆ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ತೀರಾ ಬಡ ಕುಟುಂಬದ ಹಿಂದೂ ಯುವತಿಯ ಮದುವೆಯೊಂದನ್ನು ಮುಸ್ಲಿಂ ಕಟುಂಬಗಳೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ದತೆ ಮೆರೆದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಸಮೀಪದ ಕರುವೇಲು ಎಂಬಲ್ಲಿ ಈ ಅಪರೂಪದ ಮದುವೆ ನಡೆದಿದೆ.
ಯುವತಿ ರೇವತಿ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಈಕೆಗೆ ಸಾಲ್ಮರ ಗ್ರಾಮದ ಯುವಕ ಶರತ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ನಂತರ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಈಕೆಗೆ ತಂದೆ ತಾಯಿ ಇದ್ದರೂ ಮುಂದೆ ನಿಂತು ಮದುವೆ ಮಾಡಿಸುವಷ್ಟು ಶಕ್ತರಾಗಿರಲಿಲ್ಲ.

ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು, ರೇವತಿ ಮನೆಯ ಸಮೀಪದ ಮುಸ್ಲಿಂ ಕುಟುಂಬದವರು. ಹೌದು, ವಿಚಾರ ತಿಳಿದ ಮುಸ್ಲಿಂ ಕುಟುಂಬದವರು ಮಾನವೀಯತೆಯ ದೃಷ್ಟಿಯಿಂದ ಹುಡುಗಿಯ ಪರವಾಗಿ ಹುಡುಗನ ಮನೆಯವರನ್ನು ಮಾತನಾಡಿಸಿ, ಮದುವೆಗೆ ದಿನ ನಿಗದಿ ಪಡಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಯುವತಿಯ ಕೆಲ ಬಂಧುಗಳು ಕೂಡಿಕೊಂಡಿದ್ದಾರೆ. ಚಪ್ಪರ ಹಾಕುವುದರಿಂದ ಹಿಡಿದು ಮದುವೆ ಕಾರ್ಯಕ್ಕೆ ಬೇಕಾಗುವ ಎಲ್ಲವನ್ನು ಈ ಮುಸ್ಲಿಮರೇ ಮಾಡಿದ್ದಾರೆ.
ಪಕ್ಕದ ಲತೀಫ್ ಎಂಬುವವರ ಮನೆಯಲ್ಲಿ ಮಧುಮಗಳನ್ನು ಶೃಂಗರಿಸಿ ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದರು. ಮದುವೆಯ ಅಂಗವಾಗಿ 150 ಮಂದಿಗೆ ಮಾಂಸದೂಟವನ್ನೂ ಸಿದ್ಧಪಡಿಸಿ ಉಣಬಡಿಸಿದರು.
ಮಾಂಗಲ್ಯ ಸೂತ್ರ, ಮಧುಮಗಳ 2 ಜತೆ ವಸ್ತ್ರವನ್ನೊಳಗೊಂಡಂತೆ ಎಲ್ಲ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಲತೀಫ್, ನಿಹಾ ಡ್ರೆಸ್ಸಸ್ ನ ಮಾಲೀಕ ಕೆ. ಅಬೂಬಕ್ಕರ್ , ಶಬೀರ್, ಅಶ್ರಫ್, ಕಬೀರ್, ಶಮೀರ್, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದರು.
ಧರ್ಮದ ನಡುವಿನ ಕಂದರವನ್ನು ಮರೆತು ಹೆಣ್ಣುಮಗಳ ಬಾಳಿಗೆ ದಾರಿ ದೀಪವಾಗುವ ಮೂಲಕ ಈ ಮುಸ್ಲಿಂ ಬಾಂಧವರು ಶ್ಲಾಘನೆಗೆ ಪಾತ್ರರಾಗಿದ್ದಾರೆ.












Click it and Unblock the Notifications