Food poisoning : ಮಂಗಳೂರಿನ ಹಾಸ್ಟೆಲ್‌ನಲ್ಲಿ ಚಿಕನ್ ಗೀ ರೈಸ್ ತಂದ ಸಂಕಷ್ಟ: 150ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥ
ಮಂಗಳೂರಿನ ಹಾಸ್ಟೆಲ್‌ವೊಂದರಲ್ಲಿ ಆಹಾರ ಸೇವನೆ ಮಾಡಿ ನರ್ಸಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಹಾಗಾದರೆ ಎಷ್ಟು ಜನ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಮಂಗಳೂರು, ಫೆಬ್ರವರಿ, 07: ಹಾಸ್ಟೆಲ್‌ನಲ್ಲಿ ಚಿಕನ್ ಗೀ ರೈಸ್ ತಿಂದು 150ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ತಸ್ಥರಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಸಿಟಿ ನರ್ಸಿಂಗ್ ಕಾಲೇಜಿನ ಪ್ಯಾರಾಮೆಡಿಕಲ್ ವಿದ್ಯಾಭ್ಯಾಸ ಮಾಡುವ 300ಕ್ಕೂ ಅಧಿಕ ವಿದ್ಯಾರ್ಥಿನಿಯರು ಶಕ್ತಿನಗರದ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ನಿನ್ನೆ ರಾತ್ರಿ ಹಾಸ್ಟೆಲ್‌ನಲ್ಲಿ ಚಿಕನ್ ಗೀ ರೈಸ್ ಅನ್ನು ಸೇವನೆ ಮಾಡಿದ್ದರು. ಸೋಮವಾರ ಮುಂಜಾನೆ 3 ಗಂಟೆಯ ವೇಳೆಗೆ ವಿದ್ಯಾರ್ಥಿನಿಯರಲ್ಲಿ ಹೊಟ್ಟೆನೋವು, ವಾಂತಿ-ಭೇಧಿ ಕಾಣಿಸಿಕೊಂಡಿದ್ದು, ಅನೇಕ ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾಗಿದ್ದರು.
ಹಾಸ್ಟೆಲ್‌ನಲ್ಲಿರುವ ಇತರ ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾದ ವಿಚಾರ ತಿಳಿಯುತ್ತಿದ್ದಂತೆ ಫುಡ್ ಪಾಯಿಸನ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ತುಂಬಾ ವಿದ್ಯಾರ್ಥಿನಿಯರು ವಿಷಾಹಾರ ಸೇವೆನೆ ಮಾಡಿದ್ದು, ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ರಾತ್ರಿ ಎಂಟು ಗಂಟೆಯ ವೇಳೆಗೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಹೆತ್ತವರು ಸಿಟಿ ಆಸ್ಪತ್ರೆ ಮುಂಭಾಗ ಜಮಾಯಿಸಿ, ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು
ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಘಟನೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ಯಾರಾ ಮೆಡಿಕಲ್‌ನ ವಿದ್ಯಾರ್ಥಿನಿಯರು ಶಕ್ತಿನಗರದ ಹಾಸ್ಟೆಲ್‌ನಲ್ಲಿ ನಿನ್ನೆ ಸಂಜೆ ಆಹಾರ ಸೇವಿಸಿದ್ದಾರೆ. ಹಾಸ್ಟೆಲ್‌ನಲ್ಲಿ ಮುಂಜಾನೆ ಎರಡು ಗಂಟೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಅವರು ಕಾಲೇಜುಗಳಿಗೆ ಗೈರು ಹಾಜಾರಾಗಿದ್ದರು. ಫುಡ್ ಪಾಯಿಸನ್ ಆಗಿರುವ ವಿಚಾರ ತಿಳಿದು ಇತರ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಹೆತ್ತವರು ಆತಂಕಗೊಂಡಿದ್ದರು. ಇದರಿಂದ ಸಿಟಿ ಆಸ್ಪತ್ರೆಯ ಮುಂಭಾಗ 400ಕ್ಕೂ ಅಧಿಕ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರು. ಸದ್ಯ 137 ಮಂದಿ ವಿದ್ಯಾರ್ಥಿನಿಯರನ್ನು ನಗರದ 6 ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಬೆಳಗ್ಗೆ ಆದರೂ ಕೂಡ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಆಹಾರ ಸೇವನೆ ಮಾಡಿ ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆಯಾಗಿದೆ. ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಬೇರೆ ಯಾವುದೇ ಗಂಭೀರ ಪ್ರಮಾಣದ ಏರುಪೇರು ಆಗಿಲ್ಲ," ಎಂದು ಸ್ಪಷ್ಟನೆ ನೀಡಿದರು.

ಎಲ್ಲರ ಆರೋಗ್ಯವೂ ಸ್ಥಿರವಾಗಿದೆ
ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ಅಶೋಕ್ ಮಾತನಾಡಿ, ಅನಾರೋಗ್ಯಕ್ಕೆ ಒಳಗಾದವರು ಜನರಲ್ ಮತ್ತು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯರಾಗಿದ್ದಾರೆ. ತುಂಬಾ ಜನ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ವಿದ್ಯಾರ್ಥಿನಿಯರು ಪ್ಯಾನಿಕ್ ಆಗಿದ್ದಾರೆ. ವಿದ್ಯಾರ್ಥಿನಿಯರಿಗೆ ಡೀ ಹೈಡ್ರೇಷನ್ ಆಗಿದೆ. ದಾಖಲಾದ ವಿದ್ಯಾರ್ಥಿನಿಯರನ್ನು ಒಂದರೆಡು ಗಂಟೆಯಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ. ಈಗಾಗಲೇ ಆಸ್ಪತ್ರೆಯ ತಜ್ಞ ವೈದ್ಯರು, ಹಾಸ್ಟೆಲ್‌ನ ಕುಕ್, ವಿದ್ಯಾರ್ಥಿನಿಯರ ಹೇಳಿಕೆ ಪಡೆದಿದ್ದೇವೆ. ಸದ್ಯ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ವಿಷ ಆಹಾರ ಆಗಲು ಕಾರಣದ ಬಗ್ಗೆ ತನಿಖೆ ನಡೆಸಿ ಆಹಾರವನ್ನು ಪರೀಕ್ಷೆಗೆ ಕಳುಹಿಸುವುದಾಗಿ ಹೇಳಿದ್ದಾರೆ.
ಸಿಟಿ ನರ್ಸಿಂಗ್‌ನ ಮೂರು ಹಾಸ್ಟೆಲ್‌ನಲ್ಲಿ ಒಟ್ಟು 780 ವಿದ್ಯಾರ್ಥಿಗಳಿದ್ದು, ಆಸ್ಪತ್ರೆ ಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications