ಮಹಿಳೆಗೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ, ವಿಡಿಯೋ ವೈರಲ್
ಮಂಗಳೂರು, ಮಾರ್ಚ್. 23 : ಸದಾ ಒಂದಲ್ಲ ಒಂದು ವಿವಾದಗಳಿಂದ ಗುರುತಿಸಿಕೊಳ್ಳುವ ಮಾಜಿ ಸಚಿವ, ಮುಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ
ರಸ್ತೆ ನಿರ್ಮಾಣದ ಬಗ್ಗೆ ಮನವಿ ಮಾಡಿದ ಮಹಿಳೆಯೋರ್ವರನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

ಮೂಡಬಿದ್ರೆಯ ಧರೆಗುಡ್ಡೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಶಾಸಕ ಅಭಯ್ ಚಂದ್ರ ಜೈನ್ ಅವರಲ್ಲಿ ಸ್ಥಳೀಯ ನಿವಾಸಿ ವಸಂತಿ ಪೂಜಾರ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಇಲ್ಲಿನ ಶಾಲೆಯೊಂದಕ್ಕೆ ಹೋಗುವ ರಸ್ತೆಗೆ ಇಂದಿಗೂ ಡಾಂಬರೀಕರಣ ಆಗಿಲ್ಲ. ಆ ರಸ್ತೆಯನ್ನು ಪರಿಶೀಲಿಸಿ ಎಂದಿದ್ದೇ ತಡ ಶಾಸಕ ಜೈನ್ ಸಿಡಿಮಿಡಿಗೊಂಡು ಮಹಿಳೆಗೆ ತುಳು ಭಾಷೆಯಲ್ಲಿ ಏಕವಚನದಲ್ಲಿ ಬೈದಿದ್ದಾರೆ.
ನಮ್ಮಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಮಗೆ ಶಾಲೆ ಮುಖ್ಯ. ಹೀಗಾಗಿ ರಸ್ತೆಗೆ ಡಾಂಬರೀಕರಣ ಮಾಡಿಕೊಡಿ ಎಂದು ಮಹಿಳೆ ಕೇಳಿಕೊಂಡಾಗ ಅಭಯ್ ಚಂದ್ರ ಜೈನ್, ಮಾಡಿ ಕೊಡಲ್ಲ ಅಂದ್ರೆ ಮಾಡಿಕೊಡಲ್ಲ ಏನ್ ಮಾಡ್ತಿ ನೀನು' ಅಂತಾ ಕಿಡಿಕಾರಿದ್ದಾರೆ. ಈ ವೇಳೆ ಜೈನ್ ಮಾತಿಗೆ ಜೊತೆಯಿದ್ದವರೂ ದನಿಗೂಡಿಸಿದ್ದಾರೆ.
ಇದನ್ನು ಅಲ್ಲೇ ಇದ್ದ ವ್ಯಕ್ತಿಯೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications