ಮಂಗಳೂರು ನೆಲ್ಲಿಜೋರ ನಿವಾಸಿಗಳ ನಿದ್ದೆಗೆಡಿಸಿದ ಕೋತಿ: ಒಂಟಿ ಮಂಗನ ಕಾಟಕ್ಕೆ ಜನ ಹೈರಾಣು
ಮಂಗಳೂರು, ಡಿಸೆಂಬರ್ 29: ಇತ್ತೀಚಿಗೆ ಮಲೆನಾಡು ಕರಾವಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ, ಕಾಡು ಕೋಣ, ಹಂದಿಗಳ ಕಾಟದ ಜೊತೆಗೆ ಮಂಗಗಳ ಕಾಟವು ಹೆಚ್ಚಾಗುತ್ತಿದೆ. ಮಂಗಗಳ ಗುಂಪು ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಒಂಟಿ ಮಂಗನ ಕಾಟಕ್ಕೆ ಜನ ಹೈರಾಣಾಗಿದ್ದಾರೆ.
ಮಂಗಳೂರು ನಗರದ ಹೊರವಲಯದ ಕುಪ್ಪೆಪದವು ಎಂಬಲ್ಲಿ ಕೋತಿಯೊಂದರ ಕಾಟ ಹೆಚ್ಚಾಗಿದೆ. ಮನೆಯಿಂದ ಹೊರಗೆ ಬಂದವರ ಮೇಲೆ ಕಾದು ಕುಳಿತು ಅಟ್ಯಾಕ್ ಮಾಡುತ್ತದೆ ಒಂಟಿ ವಾನರ ಕಚ್ಚಿ ಗಾಯಗೊಳಿಸಿ ಇಲ್ಲದ ಅವಾಂತರ ಸೃಷ್ಟಿಸುತ್ತಿದೆ.

ಯಾರೋ ಕುಪ್ಪೆಪದವು - ಎಡಪದವು ಮಧ್ಯಭಾಗದ ನೆಲ್ಲಿಜೋರ ಪ್ರದೇಶಕ್ಕೆ ಈ ಮಂಗನನ್ನು ತಂದು ಬಿಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದು ಬಾಲವಿಲ್ಲದ ಒಂಟಿ ವಾನರ. ಈ ಮಂಗನ ಹೊರತುಪಡಿಸಿ ಬೇರೆ ಮಂಗಗಳೇ ಈ ಪ್ರದೇಶದಲ್ಲಿಲ್ಲ. ಈ ಕೋತಿರಾಯನ ಕಪಿಚೇಷ್ಟೆಯಿಂದ ಜನತೆ ಮನೆಯಿಂದ ಹೊರಗೆ ಬರಲು ಆತಂಕಪಡುವ ಸ್ಥಿತಿ ಉಂಟಾಗಿದೆ.
ಸೀಯಾಳ, ಅಡಿಕೆಗಳನ್ನು ತಿಂದು ಹಾಳುಗೆಡವುದಿಲ್ಲ. ಆದರೆ ಮನುಷ್ಯರ ತಲೆ ಕಂಡರೆ ಸಾಕು ಅವರ ಮೇಲೆ ದಾಳಿ ನಡೆಸುತ್ತದೆ. ಕಾದು ಕುಳಿತು ದಾಳಿ ಮಾಡುತ್ತದೆ. ಈ ವಾನರ ಮನುಷ್ಯ ದ್ವೇಷದಿಂದ ಇಲ್ಲಿನ ಜನತೆ ಕಂಗೆಟ್ಟಿದ್ದಾರೆ .ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗೆ ದೂರು ನೀಡಿದ್ದರು.
ಅರಣ್ಯ ಇಲಾಖೆಯೂ ಸಹ ಕಾರ್ಯಾಚರಣೆ ಆರಂಭಿಸಿದ್ದು, ಈ ಮಂಗನ ಸೆರೆಹಿಡಿಯಲು ಗೂಡನ್ನು ಇಟ್ಟಿದ್ದರು. ಆದರೂ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ. ಏಕೆಂದರೆ ಈ ಚಾಲಾಕಿ ಕೋತಿ ಗೂಡಿನ ಹತ್ತಿರ ಬಂದರೂ ಅದರೊಳಗೆ ಸೆರೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದೆ. ಇದೀಗ ಈ ಕೋತಿ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಕೈಗೆ 22 ಸ್ಟಿಚ್ಜ್ ಹಾಕಲಾಗಿದೆ. ಇನ್ನೂ ಅನೇಕರಿಗೆ ಈ ಮಂಗ ಇದೇ ರೀತಿ ದಾಳಿ ಮಾಡಿದೆ . ಆದರೆ ಈ ಕೋತಿ ಕಾಟದಿಂದ ಮುಕ್ತರಾಗುವ ಬಗೆ ಮಾತ್ರ ಇನ್ನೂ ಊರವರಿಗೆ ಸಿಕ್ಕಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯೂ ಗಂಭೀರವಾಗಿ ಪರಿಗಣಿಸಿ ಕುಪ್ಪೆಪದವು ಅಲ್ಲಿನ ಒಂಟಿ ಮಂಗನ ಕಾಟಕ್ಕೆ ಮುಕ್ತಿ ಹಾಡಬೇಕಿದೆ.












Click it and Unblock the Notifications