ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೋ ನಿಧನ
ಮಂಗಳೂರು, ನವೆಂಬರ್ 6: ಕುಡ್ಲದ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ, ಮಂಗಳೂರಿನ ಮೊದಲ ಆಟೋ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಖ್ಯಾತಿ ಹೊಂದಿದ್ದ ಮೋಂತು ಲೋಬೋ(86) ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಇಳಿ ವಯಸ್ಸಿನಲ್ಲೂ ಆಟೋ ಓಡಿಸುತ್ತಿದ್ದ ಮೋಂತು ಲೋಬೋ ನಗರದ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಕೊನೆಯ ದಿನಗಳವರೆಗೂ ಆಟೋ ಓಡಿಸ್ತಿದ್ದಾರೆನ್ನುವುದೇ ವಿಶೇಷವೆನಿಸಿದೆ.
ತನ್ನ 86ರ ವಯಸ್ಸಲ್ಲೂ ನಿರಾಯಾಸವಾಗಿ ಆಟೋ ಓಡಿಸ್ತಿದ್ದ ಅವರು, ತಮ್ಮ 20ನೇ ವಯಸ್ಸಿನಲ್ಲಿ ಆಟೋ ಓಡಿಸಲು ಆರಂಭಿಸಿದ್ದರು. ಈ ಮೂಲಕ ಲೋಬೋ ಅವರು ತಮ್ಮ ಜೀವಿತಾವಧಿಯ 66ವರ್ಷಗಳ ಕಾಲ ಆಟೋ ಓಡಿಸಿದ್ದಾರೆ.

1955ರಲ್ಲಿ ವೃತ್ತಿ ಜೀವನ ಆರಂಭಿಸಿದ ಮೋಂತು ಲೋಬೋ
ಮಂಗಳೂರಿನ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ ಮೋಂತು ಲೋಬೋ ಅವರು 1935ರಲ್ಲಿ ಜನಿಸಿದರು. ಆರನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿದ್ದಾರೆ. ಬಳಿಕ ಉದ್ಯೋಗದ ಕನಸು ಕಂಡು ಮೊಟ್ಟ ಮೊದಲ ಬಾರಿಗೆ ಲ್ಯಾಂಬ್ರೆಟ್ಟಾ ಆಟೋ ರಿಕ್ಷಾದಲ್ಲಿ ತಮ್ಮ ಆಟೋ ಚಾಲಕ ವೃತ್ತಿ ಆರಂಭಿಸಿದ್ದರು. ಅಚ್ಯುತ ಸಾಲಿಯಾನ್ ಎಂಬವರಲ್ಲಿದ್ದ 2 ಆಟೋಗಳಲ್ಲಿ ಒಂದನ್ನು ಪಡೆದು ಮೊದಲ ಬಾರಿಗೆ ಆಟೋವನ್ನು ರಸ್ತೆಗಿಳಿಸಿದ್ದರು. 1955ರ ಹೊತ್ತಲ್ಲಿ ಮಂಗಳೂರಿನಲ್ಲಿ ಓಡಾಡಿದ ಏಳು ಆಟೋಗಳ ಪೈಕಿ ಮೋಂತು ಲೋಬೋ ಓಡಿಸಿರುವ ಆಟೋ ಮೊದಲನೆಯದ್ದು.

66 ವರ್ಷಗಳ ಕಾಲ ಆಟೋ ಓಡಿಸಿದ ಮೋಂತು ಲೋಬೋ
ಅಂದು ಒಂದು ದಿನದ ದುಡಿಮೆ 45-50 ರೂಪಾಯಿ ಇದರಲ್ಲಿ ಆಟೋ ಮಾಲೀಕರಿಗೆ 35 ರೂಪಾಯಿ ಕೊಡಬೇಕು. ಶ್ರೀಮಂತರು ಮಾತ್ರ ರಿಕ್ಷಾಗಳನ್ನು ಉಪಯೋಗಿಸುತ್ತಿದ್ದ ಕಾಲ. ಹೀಗಾಗಿ ಮೋಂತು ಲೋಬೋ ಅವರು ಆ ಬಳಿಕ 2001ರಲ್ಲಿ ಬ್ಯಾಂಕ್ ಲೋನ್ ಮಾಡಿ ಸ್ವಂತ ಆಟೋ ರಿಕ್ಷಾ ಖರೀದಿಸಿ ಓಡಿಸಲು ಶುರು ಮಾಡಿದ್ದರು. ಲೋಬೋ ಅವರು ತಮ್ಮ ಜೀವಿತಾವಧಿಯ 66ವರ್ಷಗಳ ಕಾಲ ಆಟೋ ಓಡಿಸಿದ್ದಾರೆ. ತಮ್ಮ ಕೊನೆಯ ದಿನಗಳವರೆಗೂ ಆಟೋ ಓಡಿಸಿ ತಮ್ಮ ವೃತ್ತಿ ಜೀವನದ ಮೇಲಿನ ಪ್ರೀತಿಯನ್ನು ತೋರಿಸಿದ್ದರು.

'ಸಾರಥಿ ನಂಬರ್ 1' ಪ್ರಶಸ್ತಿ ಪಡೆದಿದ್ದ ಮೋಂತು ಲೋಬೋ
ಅಚ್ಚರಿ ಅಂದರೆ ತಮ್ಮ 66 ವರ್ಷಗಳ ಚಾಲಕನ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಘಾತವನ್ನು ಎಸಗದ ದಾಖಲೆ ಇವರದ್ದಾಗಿದೆ. 40 ಕಿ.ಮೀ ಒಳಗಿನ ವೇಗದಲ್ಲಿ ಆಟೋ ಓಡಿಸುವ ಇವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೇ ಇಲ್ಲವಂತೆ. ಇವರ ಸೇವೆಯನ್ನು ದ.ಕ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಗುರುತಿಸಿದೆ. 19ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭದಲ್ಲಿ ಲೋಬೊರಿಗೆ ಮಾನ್ಯತೆ ಪ್ರಶಸ್ತಿಯನ್ನು ನೀಡಲಾಗಿತ್ತು. ಮಂಗಳೂರಿನಲ್ಲಿ 'ಆಟೋ ರಾಜ' ಬಿರುದು ಹಾಗೂ ಬೆಂಗಳೂರಿನಲ್ಲಿ 'ಸಾರಥಿ ನಂಬರ್ 1' ಪ್ರಶಸ್ತಿ ನೀಡಿದ್ದು, ಇನ್ನೂ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ಗರ್ಭಿಣಿಯರಿಗೆ ಉಚಿತ ಸೇವೆ ನೀಡುತ್ತಿದ್ದ ಮೋಂತು ಲೋಬೋ
ಮೋಂತು ಲೋಬೋ ಸ್ವಾವಲಂಬಿ. ವಯಸ್ಸು 86 ಆದರೂ ತನ್ನ ಒಂದು ಆಟೋವನ್ನು ಬಾಡಿಗೆಗೆ ಬಿಟ್ಟಿದ್ದರು. ತಾನೂ ಒಂದು ಖಾಸಗಿ ಆಟೋವನ್ನು ಓಡಿಸುತ್ತಿದ್ದರು. ಇನ್ನು ಇವರ ಆರೋಗ್ಯದ ಗುಟ್ಟು ಕಣ್ಣನ್ ದೇವನ್ ಚಹ ಅಂತ ಅವರೇ ಹೇಳಿಕೊಂಡಿದ್ದರು. ಹಲವು ವರ್ಷಗಳಿಂದ ನಿತ್ಯ 20 ಗ್ಲಾಸ್ ಚಹಾ ಕುಡಿಯೋ ಮೋಂತು ಲೋಬೋ, ಅವರ ಆಟೋದಲ್ಲೂ ಕಣ್ಣನ್ ದೇವನ್ ಚಹಾದ ಬಗ್ಗೆ ಬರೆದು ಪ್ರಚಾರ ಮಾಡುತ್ತಿದ್ದರು. ನಿತ್ಯ ಮಧ್ಯರಾತ್ರಿ ಒಂದು ಗಂಟೆಗೆ ಎದ್ದು ಚಹಾ ಸೇವಿಸಿ ಬೆಳಗ್ಗೆ 4-5ಗಂಟೆಗೆಲ್ಲಾ ಆಟೋ ಓಡಾಟ ಶುರು. ಮೋಂತು ಲೋಬೋ ಮಂಗಳೂರಿನ ಆಟೋ ರಾಜಾ ಮತ್ತು ನಂಬರ್ ಒನ್ ಸಾರಥಿಯಾಗಿದ್ದವರು. ಇದರ ಜೊತೆಗೆ ಗರ್ಭಿಣಿಯರಿಗೆ ಮತ್ತು ಅಸಕ್ತರಿಗೆ ಆಟೋದಲ್ಲಿ ಉಚಿತ ಸೇವೆ ನೀಡುತ್ತಿದ್ದರು.












Click it and Unblock the Notifications