ಮಂಗಳೂರು-ಮೈಸೂರು ಹೆದ್ದಾರಿ ಬಂದ್ ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲು
ಮಂಗಳೂರು, ಆಗಸ್ಟ್ 10: ಭಾರೀ ಮಳೆ ಸುರಿದ ಪರಿಣಾಮ ಮಂಗಳೂರು ಮಡಿಕೇರಿ ಹೆದ್ದಾರಿಯ ರಸ್ತೆ ಕುಸಿದು ಕೊಚ್ಚಿಹೋಗಿದೆ ಎಂಬ ತಲೆ ಬರಹದೊಂದಿಗೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.
ಅಸಲಿಗೆ ಈ ಘಟನೆ ಸುಳ್ಳು. ಭಾರೀ ಮಳೆಯಿಂದಾಗಿ ರಸ್ತೆ ಡಾಮರು ಕಿತ್ತು ಬಂದು ರಸ್ತೆಯೇ ಕೊಚ್ಚಿ ಹೋಗಿರುವ ಈ ಚಿತ್ರಗಳು ಸಾವಿರಾರು ಬಾರಿ ಶೇರ್ ಕೂಡ ಆಗಿವೆ. ಆದರೆ ಇದು ನಡೆದಿರುವುದು 2013ರಲ್ಲಿ.

ಈ ವಿಚಾರ ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಯಬಿಟ್ಟು ಪ್ರಯಾಣಿಕರಿಗೆ ಗಾಬರಿ ಬೀಳಿಸುತ್ತಿದ್ದಾರೆ.
ವಾಸ್ತವಾಗಿ ಇಂತಹ ಘಟನೆ ಈ ವರ್ಷ ಮೈಸೂರಿನಲ್ಲಿ ನಡೆದಿಲ್ಲ. 2013 ರಲ್ಲಿ ಮಡಿಕೇರಿಯ ಸಂಪಾಜೆಯಲ್ಲಿ ಈ ಘಟನೆ ನಡೆದಿದೆ. ಆದರೆ ಈ ಬಗೆಗಿನ ಅರಿವು ಇಲ್ಲದ ಮಂದಿ ಸುಳ್ಳನ್ನೇ ಸತ್ಯವೆಂದು ನಂಬಿ ಫೋಟೋಗಳನ್ನು ಇನ್ನೂ ಶೇರ್ ಮಾಡುತ್ತಲೇ ಇದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಫೋಟೋಗಳು, ತಿರುಚಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲವರು ಮೋಜಿಗಾಗಿ ಇಂಥ ಕೃತ್ಯಗಳನ್ನು ಎಸಗುತ್ತಾರೆ. ಒಟ್ಟಿನಲ್ಲಿ ಇಂತಹ ಫೋಟೋ ಅಥವಾ ವಿಡಿಯೊಗಳನ್ನು ಶೇರ್ ಮಾಡುವ ಮೊದಲು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗೆಗಿನ ಸತ್ಯ ಸತ್ಯತೆ ಅರಿಯುವುದು ಒಳಿತು.












Click it and Unblock the Notifications