ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ: ಮೊದಲ ಪ್ರಯಾಣದಲ್ಲಿ ಬಿಜೆಪಿ ಮುಖಂಡರು
ಮಂಗಳೂರು, ಡಿಸೆಂಬರ್ 30: ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ರೈಲಿಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ದೊರಕಿತು. ಮೊದಲ ಪ್ರಯಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿ ಮುಖಂಡರು, ವಿಶೇಷ ಅಹ್ವಾನಿತರು, ಶಾಲಾ ಮಕ್ಕಳು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಚಾಲನೆ ದೊರಕಿದ ತಕ್ಷಣ ವಂದೇ ಭಾರತ್ ರೈಲು ಮಡ್ಗಾಂವ್ ನತ್ತ ಪ್ರಯಾಣ ಬೆಳೆಸಿತು. ಮಂಗಳೂರು - ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ ಆಗಿ ಮಡಗಾಂವ್ ನಲ್ಲಿ ನಿಲುಗಡೆಯಾಗಲಿದೆ.

ಹೈಫೈ ಲುಕ್‌ನಲ್ಲಿ ಗೋಚರಿಸುವ ಈ ರೈಲು ಒಳಭಾಗದಲ್ಲೂ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಈ ರೈಲು ಗಂಟೆಗೆ 160 ಕಿ.ಮೀ.ನಷ್ಟು ವೇಗದಲ್ಲಿ ಸಂಚರಿಸುತ್ತದೆ. ಈ ಹಿಂದೆ ಸಾಮಾನ್ಯ ರೈಲು ಗೋವಾ ತಲುಪುಲು ಬೇಕಾಗಿದ್ದ 6-7ಗಂಟೆಯ ಅವಧಿ ಇದೀಗ ವಂದೇ ಭಾರತ್ ಮೂಲಕ ಕೇವಲ ನಾಲ್ಕುವರೇ ಗಂಟೆಗೆ ಇಳಿದಿದೆ.
ಈ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚರಿಸಲಿದೆ. ಸಾಮಾನ್ಯವಾಗಿ ಈ ರೈಲು ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ಆರಂಭಿಸಿ ಮಧ್ಯಾಹ್ನ 1.15ಕ್ಕೆ ಗೋವಾ ಮಡ್ಗಾಂವ್ ತಲುಪುತ್ತದೆ. ಮತ್ತೆ ಸಂಜೆ ಮಡಗಾಂವ್ ನಿಂದ 6.10 ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರಿಗೆ ವಾಪಾಸ್ ಆಗಲಿದೆ. ಈ ರೈಲು 8 ಬೋಗಿಗಳನ್ನ ಹೊಂದಿದ್ದು ಸಂಪೂರ್ಣ ಹವಾ ನಿಯಂತ್ರಿತ ವಾಗಿದೆ.

ಏರ್ ಲೈನ್ ಮಾದರಿ ಸೀಟುಗಳೊಂದಿಗೆ ಎಕ್ಸಿಕ್ಯುಟಿವ್ ಚೇರ್ ಗಳ ವ್ಯವಸ್ಥೆಗಳನ್ನು ಹೊಂದಿದೆ. ಆನ್ ಬೋರ್ಡ್ ಸಸ್ಯಾಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆಯೂ ಇದೆ. ಆನ್ ಬೋರ್ಡ್ ವೈ ಫೈ ಮತ್ತು ಇನ್ಫೋಟೈನ್ ಮೆಂಟ್ ಸಿಸ್ಟಮ್ ಕೂಡ ಇದೆ. ಇದರೊಂದಿಗೆ ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಮುಂತಾದ ಸವಲತ್ತು ಹೊಂದಿದ್ದು. ಮಂಗಳೂರಿನಲ್ಲಿ ಕರ್ನಾಟಕದ ನಾಲ್ಕನೇ ವಂದೇ ಭಾರತ್ ರೈಲು ಸಂಚಾರ ಇದಾಗಿದೆ.

ಇನ್ನು ಮಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದ ವಂದೇ ಭಾರತ್ ರೈಲಿಗೆ ಕಾರವಾರ ರೈಲು ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಪ್ರಾರಂಭದ ದಿನದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್‌ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ.












Click it and Unblock the Notifications