ಶೀಘ್ರದಲ್ಲೇ ಮಂಗಳೂರಿನ ಕಡಲ ತೀರಗಳು ರಾತ್ರಿಯೂ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ
ಮಂಗಳೂರು, ಡಿಸೆಂಬರ್ 27: ಮಂಗಳೂರು ಅಂದಾಕ್ಷಣವೇ ನೆನಪಾಗುವುದು ಅಲ್ಲಿನ ಸಮುದ್ರ ತೀರ. ಜೀವನದಲ್ಲಿ ಅದೆಷ್ಟು ಒತ್ತಡಗಳಿದ್ದರೂ ಈ ಸಮದ್ರ ತೀರದಲ್ಲಿ ನಿಂತು ದಿಗಂತದತ್ತ ನೋಡಿದರೆ ಸಾಕು ಮನಸ್ಸು ಹಗುರಾಗುತ್ತದೆ. ಇನ್ನು ಮೋಜು ಮಸ್ತಿಗೂ ಸಮುದ್ರ ತೀರಾ ಸೂಕ್ತ ಸ್ಥಳ. ಹೀಗಾಗಿ ಮಂಗಳೂರಿನ ಸಮುದ್ರ ತೀರಗಳನ್ನು ಅರಿಸಿ ಬರುವವರ ಸಂಖ್ಯೆ ದಿನಕ್ಕೆ ಸಾವಿರದ ಗಡಿ ದಾಟುತ್ತದೆ. ಇನ್ನು ಈ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಂತೂ ಸಮದ್ರ ತೀರಗಳು ಜನರಿಂದ ತುಂಬಿತುಳಕುತ್ತದೆ.
ಹಬ್ಬ ಹಾಗೂ ವಿಶೇಷ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿಯೂ ಮಂಗಳೂರಿನ ಕಡಲ ತೀರಗಳು ಜನರಿಂದ ತುಂಬಿರುತ್ತದೆ. ಈವರೆಗೆ ಮುಂಜಾನೆಯಿಂದ ರಾತ್ರಿ ತನಕ ಇಲ್ಲಿ ಜನರ ಪ್ರವೇಶಕ್ಕೆ ಅನುಮತಿ ಇದ್ದು, ಶೀಘ್ರದಲ್ಲೇ ಪ್ರವಾಸಿಗರ ಬಹುದಿನದ ಬೇಡಿಕೆ ಈಡೇರಲಿದೆ. ಹೌದು, ಮಂಗಳೂರಿನ ಕಡಲ ತೀರಗಳು ಶೀಘ್ರದಲ್ಲೇ ರಾತ್ರಿ ಸಮಯದಲ್ಲೂ ಪ್ರವಾಸಿಗರಿಗೆ ಮುಕ್ತವಾಗುವ ಸಾಧ್ಯತೆ ಹೆಚ್ಚಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಬೀದಿ ದೀಪಗಳು, ಲೈಫ್ ಗಾರ್ಡ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
'ಮೊದಲು ಮಂಗಳೂರಿನ ಜನಪ್ರಿಯ ಕಡಲ ತೀರವಾದ ಪಣಂಬೂರು ಬೀಚ್ಅನ್ನು ರಾತ್ರಿ 1 ಗಂಟೆವರೆಗೆ ಪ್ರವಾಸಿಗರಿಗೆ ತೆರೆಯಲು ಯೋಜಿಸಲಾಗಿದೆ. ನಂತರದ ದಿನಗಳಲ್ಲಿ ತಣ್ಣೀರು ಬಾವಿ ಬೀಚ್. ಬ್ಲೂಫ್ಲ್ಯಾಗ್ ಬೀಚ್‌ಗಳಲ್ಲೂ ಈ ಕ್ರಮ ಅನುಸರಿಸಲಾಗುವುದು. ಈಗಾಗಲೇ ಈ ಯೋಜನೆ ಜಾರಿಗೊಳಿಸಲು ಉದ್ದೇಶವಿತ್ತು. ಆದರೆ ಕೆಲ ಕಾರಣಗಳಿಂದ ಇದು ವಿಳಂಬವಾಗಿದೆ' ಎಂದು ಹೇಳಿದರು.
ಕಣ್ಣಾವಲು, ಬೆಳಕು, ಲೈಫ್ ಗಾರ್ಡ್‌ಗಳಂತಹ ಎಲ್ಲಾ ಅಗತ್ಯ ಭದ್ರತಾ ವ್ಯವಸ್ಥೆಗಳು ಜಾರಿಯಾದ ನಂತರ ಒಂದು ಅಥವಾ ಎರಡು ವಾರಗಳಲ್ಲಿ ಕಡಲ ತೀರಗಳು ರಾತ್ರಿ ಸಮಯದಲ್ಲೂ ಪ್ರವಾಸಿಗರಿಗೆ ಮುಕ್ತವಾಗುವ ಸಾಧ್ಯತೆ ಇದೆ. ಇನ್ನು ರಾತ್ರಿ ವೇಳೆಯಲ್ಲೂ ಬೀಚ್‌ಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಅನುಮತಿ ನೀಡಿದೆ.
ಇನ್ನು ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾತನಾಡಿ,' ಕಡಲ ತೀರಗಳನ್ನು ಸುರಕ್ಷಿತಗೊಳಿಸಿದ ಮೇಲೆ ರಾತ್ರಿಯಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡಲು ನಮಗೆ ಯಾವುದೇ ತೊಂದರೆ ಇಲ್ಲ. ಆದರೆ, ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿಡುವ ನಿಯಮವು ಸದ್ಯಕ್ಕೆ ಬೆಂಗಳೂರು ಹೊರತುಪಡಿಸಿಇತರ ನಗರಗಳಿಗೆ ಅನ್ವಯಿಸುವುದಿಲ್ಲ' ಎಂದು ತಿಳಿಸಿದರು.












Click it and Unblock the Notifications