ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಏರಿಕೆ ಇಲ್ಲ
ಮಂಗಳೂರು, ಮೇ 26 : ಮಂಗಳೂರಿನಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣದರವನ್ನು ಪರಿಷ್ಕರಣೆ ಮಾಡಿಲ್ಲ. ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ ಕುರಿತು ಚರ್ಚಿಸಲು ಜೂನ್ 3ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಲಾಗಿದೆ.
ಖಾಸಗಿ ಬಸ್ ಮಾಲೀಕರು ಸಾರಿಗೆ ಪ್ರಾಧಿಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಪ್ರಯಾಣ ದರವನ್ನು ವಸೂಲು ಮಾಡುತ್ತಿರುವ ಬಗ್ಗೆ ಸಾರಿಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕೆಲವು ಬಸ್ಸುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ಎ. ಖಾನ್ ಹೇಳಿದ್ದಾರೆ.

ಸೋಮವಾರದಿಂದ ಖಾಸಗಿ ಬಸ್ಸುಗಳ ಮಾಲೀಕರು ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿದ್ದರು. ಸದ್ಯ, ಜೂನ್ 3ರಂದು ಕರೆದಿರುವುದರಿಂದ ಅದುವರೆಗೆ ದರ ಏರಿಕೆ ಮಾಡದಂತೆ ಮಾಲೀಕರಿಗೆ ಸಾರಿಗೆ ಪ್ರಾಧಿಕಾರ ಸೂಚನೆ ನೀಡಿದೆ. ದರ ಏರಿಕೆ ಬಗ್ಗೆ ಆಕ್ಷೇಪಣೆಳಿದ್ದರೆ, ಸಭೆಗೆ ಸಾರ್ವಜನಿಕರು ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಖಾಸಗಿ ಬಸ್ ಪ್ರಯಾಣ ದರವನ್ನು ಮೇ 26ರಿಂದ ಏರಿಕೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ತಿಳಿಸಿತ್ತು. ಆದ್ದರಿಂದ ಮಂಗಳೂರು - ಉಡುಪಿ ಮಾರ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ ಬಗ್ಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಸಾರಿಗೆ ಪ್ರಾಧಿಕಾರ ಈ ಪ್ರಕಟಣೆ ಹೊರಡಿಸಿದೆ.












Click it and Unblock the Notifications