ಮಹಾ ಶಿವರಾತ್ರಿಗೆ ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳ ಗಮನಕ್ಕೆ: ಇಲ್ಲಿದೆ ಮುಖ್ಯವಾದ ಮಾಹಿತಿ
ಮಂಗಳೂರು, ಫೆಬ್ರವರಿ 25: ಮಹಾ ಶಿವರಾತ್ರಿಗೆ ಇನ್ನೇನು ಒಂದು ದಿನ ಬಾಕಿಯಿದ್ದು, ರಾಜ್ಯದ ಎಲ್ಲಾ ಶಿವನ ದೇವಾಲಯಗಳು ಶಿವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈಗಾಗಲೇ ಮಹಾ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ತಟದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ.
ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ಅಂತರ್ ರಾಜ್ಯದಿಂದಲೂ ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿದೆ ಭೇಟಿ ನೀಡುತ್ತಾರೆ. ಅದರಲ್ಲೂ ಮಹಾ ಶಿವರಾತ್ರಿ ಸಮಯದಲ್ಲಂತೂ ಅಸಂಖ್ಯಾತ ಶಿವನ ಭಕ್ತರು ಧರ್ಮಸ್ಥಳದಲ್ಲಿ ಜಮಾವಣೆಗೊಳ್ಳುತ್ತಾರೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಅಂದರೆ ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಭದ್ರಾವತಿ, ಹಾಸನ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಭಕ್ತರು ಶ್ರೀ ಧರ್ಮಸ್ಥಳದತ್ತ ಪಾದಯಾತ್ರೆ ಕೈಗೊಂಡಿದ್ದು, ಅನೇಕರು ಈಗಾಗಲೇ ಶ್ರೀಕ್ಷೇತ್ರವನ್ನು ತಲುಪಿದ್ದಾರೆ.

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನೇಕ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ವಿಶೇಷ ಸೂಚನೆ ನೀಡಿದೆ. 26-02-2025 ಬುಧವಾರ ಮಹಾ ಶಿವರಾತ್ರಿಯ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ಉತ್ಸವಗಳು ನಡೆಯುವುದರಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಯವಾಗಬಹುದು.
27-02-2025 ಗುರುವಾರ ಬೆಳಗ್ಗೆ ರಥೋತ್ಸವ, ವಿಶೇಷ ಪೂಜೆ, ಉತ್ಸವಗಳಿರುವ ಕಾರಣ 9 ಗಂಟೆಯ ಬಳಿಕ ದೇವರ ದರ್ಶನ, ತುಲಭಾರ ಸೇವೆ ಹಾಗೂ ಇತರೆ ಸೇವೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಭಕ್ತಾಧಿಗಳು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ಸಂಜೆಯಿಂದ ಜಾಗರಣೆ ಆರಂಭವಾಗಲಿದ್ದು, ಇಡೀ ರಾತ್ರಿ ಭಕ್ತರು, ಶಿವ ನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆಯನ್ನು ಮಾಡಲಿದ್ದಾರೆ. ಇನ್ನು ಮಹಾ ಶಿವರಾತ್ರಿಗೆ ಶ್ರೀ ಮಂಜುನಾಥ ಸ್ವಾಮಿಗೆ ಆಹೋರಾತ್ರಿ ಶತರುದ್ರಾಭಿಷೇಕ, ಎಳನೀರು ಅಭಿಷೇಕ ನಡೆಯಲಿದೆ. ಹಾಗೂ ಮಾರನೇ ದಿನ ಬೆಳಗಿನ ಜಾವ ಕ್ಷೇತ್ರದಲ್ಲಿ ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರುವ ಸಾಧ್ಯತೆಗಳಿರುವುದಿಂದ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.












Click it and Unblock the Notifications