ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಶೆಯೇರಿಸಿದ ಲಾಕ್ ಡೌನ್!
ಮಂಗಳೂರು, ಮೇ 27; ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮದ್ಯವನ್ನು ಸೇರಿಸಿದೆ. ಲಾಕ್‌ಡೌನ್ ನಡುವೆ ಬೆಳಗ್ಗೆ 6 ಗಂಟೆಗೆ ಹಾಲಿನ ಜೊತೆಗೆ ಆಲ್ಕೋಹಾಲ್ ಕೂಡಾ ಸಿಗುತ್ತದೆ. ಇದರಿಂದ ಕುಡುಕರ ಸಂಖ್ಯೆಯೂ ಹೆಚ್ಚಿದೆ. ಕುಡಿತದ ಸಂಖ್ಯೆಯೂ ಹೆಚ್ಚಾಗಿದೆ.
ಮದ್ಯ ಯಥೇಚ್ಛವಾಗಿ ಸಿಗುವುದರಿಂದ ಕೆಲವು ಜನರು ಮನೆಯಲ್ಲಿಯೇ ಇಡೀ ದಿನ ಮದ್ಯದ ದಾಸರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ನೀಡಿರುವ ದಾಖಲೆಗಳು ಈ ಅಂಶಗಳನ್ನು ಪುಷ್ಠೀಕರಿಸುತ್ತಿದೆ.
ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 1ರಿಂದ ಮೇ 25ರವರೆಗೆ 1,61,933 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದೆ. ಕಳೆದ ವರ್ಷದ ಮೇ ತಿಂಗಳ 25 ದಿನಗಳ ಲೆಕ್ಕಾಚಾರ ನೋಡಿದರೆ ಈ ವರ್ಷ 70,000 ಲೀಟರ್ ಮದ್ಯ ಹೆಚ್ಚು ಮಾರಾಟವಾಗಿದೆ.

ಲಾಕ್ ಡೌನ್ ವೇಳೆ ಮನೆಯಲ್ಲಿಯೇ ಇರುವ ಮದ್ಯಪ್ರಿಯರು ಹೆಚ್ಚುವರಿ ಮದ್ಯವನ್ನು ಸೇವಿಸುತ್ತಿದ್ದಾರೆ ಅನ್ನೋದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಅದರಲ್ಲೂ ಸ್ಕಾಚ್, ವಿಸ್ಕಿ ಸೇರಿದಂತೆ ದುಬಾರಿ ಮದ್ಯದ ಬದಲು ಕಡಿಮೆ ದರದ ಮದ್ಯವೇ ಅತೀ ಹೆಚ್ಚು ಮಾರಾಟವಾಗಿದೆ. ಕೆಲಸವಿಲ್ಲದ ಕಾರಣ ಕಡಿಮೆ ದರದ ಮದ್ಯಕ್ಕೆ ಜನರು ಹೆಚ್ಚು ಅವಲಂಬಿತರಾಗಿದ್ದಾರೆ.
ಈ ಬಾರಿ ಕರಾವಳಿಯಲ್ಲಿ ಬೇಸಿಗೆ ಯ ಅವಧಿ ಕಡಿಮೆಯಾಗಿ ಮಳೆಯ ಪ್ರಮಾಣವೇ ಜಾಸ್ತಿಯಾಗಿದೆ. ಪರಿಸರದ ಉಷ್ಣಾಂಶ ಕಡಿಮೆಯಾಗಿ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ.
ಮೇ 1 ರಿಂದ ಮೇ25ರವರೆಗ ಕೇವಲ 39,241 ಬಾಕ್ಸ್‌ಗಳು ಮಾತ್ರ ಮಾರಾಟವಾಗಿದೆ. ಮಳೆಯ ವಾತವರಣ ಇರುವುದರಿಂದ ಬಿಯರ್ ಬದಲು ಬೇರೆ ಮದ್ಯಕ್ಕೆ ಜನರು ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ.
ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದೆ. ದಿನದ ಕೆಲಹೊತ್ತು ಮಾತ್ರ ನಶೆಯಲ್ಲಿರುತ್ತಿದ್ದ ಮದ್ಯಪ್ರಿಯರು ಇದೀಗ ಇಡೀ ದಿನ ನಶೆಯಲ್ಲಿದ್ದು, ಕುಡಿತದ ದಾಸರಾಗುತ್ತಿದ್ದಾರೆ.












Click it and Unblock the Notifications