ಅಯೋಧ್ಯೆಯ ರಾಮಲಲ್ಲಾನಿಗೆ ಕಾಶೀಮಠದಿಂದ ಬೃಹತ್ ಸ್ವರ್ಣ ಹಾರ: ಏನಿದರ ವಿಶೇಷತೆ?
ಮಂಗಳೂರು, ಜನವರಿ 23: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದ್ದು, ಭಾರತದ ಶತಕೋಟಿ ರಾಮನ ಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ವಿರಾಜಮಾನನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೆ ಸ್ವಾಮೀಜಿ ಕಾಶೀಮಠದಿಂದ ವಿಶೇಷ ಉಡುಗೊರೆ ಸಮರ್ಪಿಸಲಾಗಿದೆ.
ಮಂಗಳೂರು ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಕಾಶೀಮಠದ ವತಿಯಿಂದ ರಾಮಲಲ್ಲಾನಿಗೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ವಿಶೇಷ ಸ್ವರ್ಣಹಾರವನ್ನು ಸಮರ್ಪಿಸಿದ್ದಾರೆ.

ಸ್ವರ್ಣಪುಷ್ಪ ಮಾಲೆಯುಕ್ತ ಈ ಸ್ವರ್ಣಹಾರವು 18 ಚಕ್ರಣಿಕಾ ಸಾಲಿಗ್ರಾಮದಿಂದ ಅಲಂಕರಿಸಲ್ಪಟ್ಟದೆ. ಜೊತೆಗೆ ನವರತ್ನ ಖಚಿತ ಪದಕವನ್ನು ಹೊಂದಿದೆ. ಬಹಳ ಆಕರ್ಷಕ ಶೈಲಿಯಲ್ಲಿ ರಚಿಸಲ್ಪಟ್ಟಿರುವ ಈ ಸ್ವರ್ಣಹಾರವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರ ಮಾಡಲಾಗಿದೆ.
ಕಾಶೀಮಠದ ಪರವಾಗಿ ಆಲ್ ಟೆಂಪಲ್ ಅಸೋಸಿಯೇಷನ್ ಅಧ್ಯಕ್ಷ ಅತುಲ್ ಕುಡ್ವ, ಫೂಜ್ಲಾನಾ ಗ್ರೂಪ್ ನ ಅನಂತ್ ಪೈ, ದೆಹಲಿ ಸಮಾಜದ ಗಣೇಶ್ ಮಲ್ಯ, ಸಮಾಜದ ಪ್ರಮುಖರು ಮತ್ತು ಗಣ್ಯರು ಹಸ್ತಾಂತರಿಸಿದರು.

ರಾಮಮಂದಿರ ಲೋಕಾರ್ಪಣೆ: ಧರ್ಮಸ್ಥಳ ಮೇಳದಿಂದ ಯಕ್ಷಗಾನ ಸೇವೆ
ರಾಮಮಂದಿರದ ಲೋಕಾರ್ಪಣೆ, ಶ್ರೀರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರಸಂಗದಲ್ಲಿ ಮೂರು ದಿನ ಶ್ರೀರಾಮಪಟ್ಟಾಭಿಷೇಕ ಮಹೋತ್ಸವದ ವಿಶೇಷ ಸನ್ನಿವೇಶವನ್ನು ಪ್ರದರ್ಶಿಸಲಾಗಿದೆ.
ಈ ಬಾರಿ ಶ್ರೀರಾಮ ಕಾರುಣ್ಯಾಂಬುಧಿ ಪ್ರಸಂಗ ಮೇಳದಲ್ಲಿ ಪ್ರದರ್ಶನಗೊಂಡಿದೆ. ರಾವಣವಧೆಯ ಬಳಿಕ ರಾಮ ಪಟ್ಟಾಭಿಷೇಕದ ವಿಶೇಷ ಸನ್ನಿವೇಶವನ್ನು ಜೋಡಿಸಲು ಮೇಳದ ಭಾಗವತರು ರಾಮಕೃಷ್ಣ ಮಯ್ಯರು ಚಿಂತಿಸಿದ್ದರು. ಇದನ್ನು ಹೇಮಾವತಿ ವಿ. ಹೆಗ್ಗಡೆಯವರ ಗಮನಕ್ಕೆ ತಂದಾಗ ಇದನ್ನು ಮೂರು ದಿನಗಳ ಕಾಲ ನಡೆಸುವಂತೆ ಸೂಚಿಸಿದ್ದರು. ಅದರಂತೆ ಶ್ರೀರಾಮ ಕಾರುಣ್ಯಾಂಬುಧಿ ಪ್ರಸಂಗದಲ್ಲಿ ಈ ಸನ್ನಿವೇಶ ಪ್ರದರ್ಶಿಸಲಾಗಿದೆ.
ಯಕ್ಷಗಾನದಲ್ಲಿ ರಾಮ - ಸೀತೆಯರು ಪಟ್ಟಾಭಿಷಿಕ್ತರಾಗಿದ್ದರೆ, ಲಕ್ಷ್ಮಣ, ಭರತ, ಶತ್ರುಘ್ನಾದಿ, ವಿಭೀಷಣ, ಮಾತಾಲಿಗಳು ಇಕ್ಕೆಲಗಳಲ್ಲಿ ನಿಂತಿದ್ದಾರೆ. ಹನುಮ ವಿನಮ್ರ ಭಾವದಿಂದ ಪಾದಮೂಲದಲ್ಲಿದ್ದರೆ, ಕುಲಗುರು ವಶಿಷ್ಠರು ಹಾಗೂ ಮಂತ್ರಿ ಸುಮಂತ್ರರು ಆಚೆ ಈಚೆಬದಿ ಕುಳಿತಿದ್ದಾರೆ. ಸಖಿಯೊಬ್ಬಳು ರಾಮನಿಗೆ ಚಾಮರ ಬೀಸುತ್ತಿದ್ದಾಳೆ. ಅಯೋಧ್ಯೆಯ ಪುರಜನರು ಹೊರಕಾಣಿಕೆ ಸಹಿತ ಶ್ರೀರಾಮ ಘೋಷವನ್ನು ಮಾಡುತ್ತಾ ಮೆರವಣಿಗೆಯಲ್ಲಿ ಬರುತ್ತಾರೆ.
ಬಳಿಕ ರಾಮಪಟ್ಟಾಭಿಷಿಕ್ತ ರಾಮನ ಮುಂದೆ ವಿಶೇಷ ನೃತ್ಯೋತ್ಸವ ನಡೆಯುತ್ತದೆ. ಅದಕ್ಕಾಗಿ ವಿಶೇಷ ಪದ್ಯವನ್ನು ಜೋಡಣೆ ಮಾಡಲಾಗಿದೆ. ಮೊದಲ ಪದ್ಯ ಪುತ್ತಿಗೆ ರಾಮಕೃಷ್ಣ ಜೋಯಿಸರ ಹಳೆಯ ಪ್ರಸಂಗದಿಂದ ಆಯ್ದುಕೊಂಡರೆ, ಇನ್ನೊಂದು ಪದ್ಯವನ್ನು ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆಯವರು ಹೊಸದಾಗಿ ರಚಿಸಿದ್ದಾರೆ. ಈ ಸನ್ನಿವೇಶದ ಸಂದರ್ಭ ಮೇಳದ ಹೆಚ್ಚಿನ ಕಲಾವಿದರು ರಂಗಸ್ಥಳದಲ್ಲಿರುವುದು ವಿಶೇಷವಾಗಿದೆ.












Click it and Unblock the Notifications