ಮಂಗಳೂರು ಪಾಸ್‌ಪೋರ್ಟ್ ಕೇಂದ್ರ ಉನ್ನತೀಕರಣಕ್ಕೆ ಮನವಿ
ಮಂಗಳೂರು, ಏ.21 : ಮಂಗಳೂರು ಪಾಸ್‌ಪೋರ್ಟ್ ಕಚೇರಿಯನ್ನು ಪೂರ್ಣ ಪ್ರಮಾಣದ ಕಚೇರಿಯನ್ನಾಗಿ ಉನ್ನತೀಕರಣಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕಾರ್ತಿಕೇಯನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ಪಾಸ್‌ಪೋರ್ಟ್ ಸೇವಾಕೇಂದ್ರದಲ್ಲಿ ದಿನವೊಂದಕ್ಕೆ 605 ಮಂದಿಗೆ ಪಾಸ್‌ಪೋರ್ಟ್‌ನ್ನು ವಿತರಿಸುವ ಸೌಲಭ್ಯವಿದ್ದು, ಅದನ್ನು ಒಂದು ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಐವಾನ್ ಡಿಸೋಜಾ ಅವರು ಸೋಮವಾರ ಮನವಿ ಮಾಡಿದ್ದಾರೆ. [10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ?]

ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಖಾಲಿಯಾಗುವ ಕಚೇರಿಯನ್ನು ಪಾಸ್‌ಪೋರ್ಟ್ ಕಚೇರಿಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಐವನ್ ಡಿಸೋಜ ಹೇಳಿದ್ದಾರೆ. [ಏನಿದು ಇ ಪಾಸ್ ಪೋರ್ಟ್? ಏನು ಪ್ರಯೋಜನ?]
ಮಂಗಳೂರಿನಲ್ಲಿ ಪಾಸ್‌ಪೋರ್ಟ್ ಕಚೇರಿಗೆ ಹೆಚ್ಚುವರಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಮತ್ತು ರಸ್ತೆಯ ಬದಿಯಲ್ಲಿ ಬ್ಯಾರಿಕೇಡ್ ಹಾಕುವ ಮುಖಾಂತರ ಕಚೇರಿಗೆ ಆಗಮಿಸುವ ಜನರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಪಾಸ್‌ಪೋರ್ಟ್ ಅಧಿಕಾರಿ ಕಾರ್ತಿಕೇಯನ್ ಅವರು, ಈಗಾಗಲೇ ಪೂರ್ಣಪ್ರಮಾಣದ ಪಾಸ್‌ಪೋರ್ಟ್ ಕಚೇರಿಯನ್ನಾಗಿ ಮಾಡಲು ಕೇಂದ್ರ ವಿದೇಶಾಂಗ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications