ಕಾಲಿಯಾ ರಫೀಕ್ ನ ಕೊಲ್ಲಿಸಿದ್ದು ನಾನೇ ಎಂದ ದುಬೈನಲ್ಲಿರುವ ಜಿಯಾ
ಮಂಗಳೂರಿನ ರೌಡಿ ಕಾಲಿಯಾ ರಫೀಕ್ ನನ್ನು ಕೊಲೆ ಮಾಡಿಸಿದ್ದು ನಾನೇ ಎಂದು ದುಬೈನಿಂದ ಕರೆ ಮಾಡಿ ಹೇಳಿದ್ದಾನೆ ಜಿಯಾ ಯಾನೆ ಝಿಯಾದ್. ಅಷ್ಟೇ ಅಲ್ಲ, ತಾನೇ ಬಂದು ಪೊಲೀಸರಿಗೆ ಶರಣಾಗುವುದಾಗಿ ಕೂಡ ಹೇಳಿದ್ದಾನೆ
ಮಂಗಳೂರು, ಫೆಬ್ರವರಿ 18: ದುಬೈನಿಂದ ಫೋನ್ ಕರೆ ಬಂದಿದೆ. ಅತ್ತ ಕಡೆಯಿಂದ ಜಿಯಾ ಯಾನೆ ಝಿಯಾದ್ ಹಲೋ ಅಂದವನೇ, ಕಾಲಿಯಾ ರಫೀಕ್ ನನ್ನು ತೆಗೆಸಿದ್ದು ತಾನೇ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಆ ಮೂಲಕ ರೌಡಿ ಕಾಲಿಯಾ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅಷ್ಟೇ ಅಲ್ಲ, ನನ್ನ ತಂಡಕ್ಕೆ ಯಾರೇ ತೊಂದರೆ ನೀಡಿದರೂ ಅವರನ್ನು ಕೊಲ್ಲಿಸುತ್ತೇನೆ ಎಂದು ಧಮಕಿ ಹಾಕಿದ್ದಾನೆ.
ಕಾಲಿಯಾ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಕೊಲ್ಲುವುದಾಗಿ ಭೂಗತ ಲೋಕದವರು ಪತ್ರಕರ್ತರಿಗೆ ಫೋನ್ ಮಾಡಿ ಹೇಳಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಜಿಯಾ ಪತ್ರಕರ್ತರಿಗೆ ಫೋನಾಯಿಸಿ ಈ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದಾನೆ. ಸದ್ಯ ದುಬೈಯಲ್ಲಿರುವ ಈತ ವಾರದೊಳಗೆ ಊರಿಗೆ ಬಂದು ಪೊಲೀಸರಿಗೆ ಶರಣಾಗುವೆ ಎಂದಿದ್ದಾನೆ.[ನಟೋರಿಯಸ್ ರೌಡಿ ಕಾಳಿಯಾ ರಫೀಕ್ ಕೊಲೆ ಹಿಂದಿನ ಮರ್ಮವೇನು ?]

ಈ ಮಧ್ಯೆ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಜಿಯಾನೇ ಕಾಲಿಯಾ ರಫೀಕ್‌ನನ್ನು ಕೊಲೆ ಮಾಡಲು ತಮ್ಮನ್ನು ನೇಮಿಸಿದ್ದ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಭೂಗತಲೋಕದ ಬೆದರಿಕೆಗಳಿಗೆ ಜಗ್ಗುವುದಿಲ್ಲ
ಹಲವು ವಿಚಾರಗಳಲ್ಲಿ ಕಾಲಿಯಾ ರಫೀಕ್ ನನಗೆ ಬದ್ದ ವೈರಿಯಾಗಿದ್ದ. ಅಲ್ಲದೇ ನನ್ನನ್ನು ಮತ್ತು ಜೊತೆಗಿರುವವರನ್ನು ಕೊಲ್ಲುತ್ತೇನೆ ಎಂದು ಕಾಲಿಯಾ ರಫೀಕ್ ಹೇಳಿದ್ದ. ಇದೇ ವಿಚಾರವಾಗಿ ನಾವು ಆತನನ್ನು ಮುಗಿಸಲು ಯೋಜನೆ ರೂಪಿಸಿದ್ದೆವು ಎಂದು ಜಿಯಾ ಹೇಳಿದ್ದಾನೆ. ಪ್ರಮುಖ ಆರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಜಿಯಾ, "ಭೂಗತಲೋಕದ ಬೆದರಿಕೆಗಳಿಗೆ ಜಗ್ಗುವುದಿಲ್ಲ" ಎಂದೂ ಹೇಳಿದ್ದಾನೆ.












Click it and Unblock the Notifications