ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಕಿ ಆಟಗಾರ ಕೊಡಗಿನ ಸುನಿಲ್
ಮಂಗಳೂರು, ಮಾರ್ಚ್ 05: ಭಾರತ ಹಾಕಿ ತಂಡದ ಫಾರ್ವರ್ಡ್ ಪ್ಲೇಯರ್, ಅರ್ಜುನ ಪ್ರಶಸ್ತಿ ವಿಜೇತ ಕೊಡಗಿನ ಎಸ್.ವಿ ಸುನೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸುನೀಲ್, ಮಂಗಳೂರು ಮೂಲದ ನಿಶಾರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ನಿಶಾ ಮಂಗಳೂರಿನ ಕೊಂಚಾಡಿ ಗ್ರಾಮದ ತಾರನಾಥ-ಸುನಿತಾ ಅವರ ದಂಪತಿಯ ಪುತ್ರಿಯಾಗಿದ್ದು, ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮುದಾಯದ ಪದ್ಧತಿಯಂತೆ ಮದುವೆ ಕಾರ್ಯಕ್ರಮ ನಡೆಸಲಾಯಿತು.

ಆಪ್ತರಿಗೆಷ್ಟೆ ಆಮಂತ್ರಣವಿದ್ದ ಕಾರಣ ಸೀಮಿತ ಸಂಖ್ಯೆಯಲ್ಲಿ ಬಂಧು-ಮಿತ್ರರು, ಸ್ನೇಹಿತರು ಹಾಗೂ ಹಾಕಿ ತಂಡದ ಐವರು ಮಿತ್ರರು ಪಾಲ್ಗೊಂಡಿದ್ದರು. ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಸುನೀಲ್ ಅವರಿಗೆ ಅಚ್ಚರಿ ನೀಡಿ ಸ್ಟೇಜ್ ನಲ್ಲಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ.

ಸೋಮವಾರ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ಸ್ನೇಹಿತರು, ಭಾರತ ಹಾಕಿ ತಂಡದ ಆಟಗಾರರು, ಮಾಜಿ ಆಟಗಾರರಾದ ಅರ್ಜುನ್ ಹಾಲಪ್ಪ, ಧನರಾಜ್ ಪಿಳೈ, ಎ.ಬಿ.ಸುಬ್ಬಯ್ಯ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಆರತಕ್ಷತೆಗೆ ಸುಮಾರು ಎರಡೂವರೆ ಸಾವಿರ ಮಂದಿಗೆ ಆಮಂತ್ರಣ ನೀಡಲಾಗಿದ್ದು ಈ ಸಂಬಂಧ ಎಲ್ಲ ಸಿದ್ಧತೆ ಮಾಡಲಾಗಿದೆ.













Click it and Unblock the Notifications