ಮಂಗಳೂರು: ಐಕಳ ಕಂಬಳದಲ್ಲಿ ನೂತನ ಆವಿಷ್ಕಾರ, ಹೊಸ ಪ್ರಯೋಗಕ್ಕೆ ನಾಂದಿ
ಮಂಗಳೂರು, ಫೆಬ್ರವರಿ 05: ತುಳುನಾಡಿನ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಂಬಳ ಕೋಣಗಳ ಸಂಖ್ಯೆಯೂ ಹೆಚ್ಚಾಗಿದೆ. ನಿಗದಿತ ಸಮಯಕ್ಕೆ ಕಂಬಳ ಮುಗಿಸಲು ಸಾಧ್ಯವಾಗದ ಕಾರಣ ಕಂಬಳ ಸಮಿತಿ ಈಗ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.
ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಹೊಸ ತಂತ್ರಜ್ಞಾನದ ಆವಿಷ್ಕಾರ ಆಗುತ್ತಿದೆ. ಒಂದೆಡೆ ಕಂಬಳದ ಜನಪ್ರಿಯತೆಯೂ ಹೆಚ್ಚುತ್ತಿದೆ. ಜನಪ್ರಿಯತೆ ಹೆಚ್ಚಿದಂತೆ ಕೋಣಗಳ ಭಾಗವಹಿಸುವಿಕೆಯ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ನಿಗದಿತ ಸಮಯದಲ್ಲಿ ಕಂಬಳ ಮುಕ್ತಾಯ ಮಾಡುದಕ್ಕೆ ಸಾಧ್ಯ ಆಗುತ್ತಿಲ್ಲ.

24 ಗಂಟೆಯಲ್ಲಿ ಮುಕ್ತಾಯ ಆಗುತ್ತಿದ್ದ ಆಧುನಿಕ ಕಂಬಳ 36/40 ಗಂಟೆ ಆದರ ಮುಕ್ತಾಯವಾಗದೇ, ಇರುವುದು ಜಿಲ್ಲಾ ಸಮಿತಿಗೆ ತಲೆ ನೋವಾಗಿತ್ತು. ಹೀಗಾಗಿ ನಿಗದಿತ ಸಮಯದಲ್ಲಿ ಕಂಬಳ ಮುಕ್ತಾಯಗೊಳಿಸಲು ಹಾಗೂ ನಿಖರ ಫಲಿತಾಂಶಕ್ಕಾಗಿ ಹೊಸ ತಂತ್ರಜ್ಞಾನಗ ಆವಿಷ್ಕಾರ ಮಾಡಲಾಗಿದೆ.
ಈ ಅವಿಷ್ಕಾರದ ಮೊದಲ ಪ್ರಯೋಗವನ್ನು ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದ ಐಕಳ ಕಂಬಳದಲ್ಲಿ ಮಾಡಲಾಗಿದೆ. ಐಕಳಬಾವ ಕಾಂತಬಾರೆ ಬೂದಬಾರೆ ಕಂಬಳದಲ್ಲಿ ಸ್ವಯಂಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೊ ಫಿನಿಶ್ ಫಲಿತಾಂಶದ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ.

ವಿವಿಧ ವಿಭಾಗದ ಕೋಣಗಳಿಗೆ ಬೇರೆ ಬೇರೆ ಸಮಯ ನಿಗದಿ ಮಾಡಲಾಗಿದ್ದು, ನಿಗದಿತ ಸಮಯದಲ್ಲಿ ಒಂದು ವೇಳೆ ಕೋಣ ಬಿಡದಿದ್ದರೆ ನೆಟ್ ಮಾದರಿಯ ಗೇಟ್ ಬೀಳುತ್ತದೆ. ಇದಾದ ನೂರು ಸೆಕೆಂಡ್ ನಿಂದ ಇಳಿಕೆ ಕ್ರಮದಲ್ಲಿ 10 ಸೆಕೆಂಡ್ ವರೆಗೆ ರೆಡ್ ಲೈಟ್, ಹತ್ತು ಸೆಕೆಂಡ್‌ನಿಂದ ಒಂದು ಸೆಕೆಂಡ್ ವರೆಗೆ ಹಳದಿ ಲೈಟ್, ನಂತರ ಝಿರೋ ಸೆಕೆಂಡ್ ಆದಾಗ ಹಸಿರು ಲೈಟ್ ಉರಿಯಲಿದೆ. ಈ ಅವಧಿಯಲ್ಲಿ ಕೋಣವನ್ನು ಬಿಡಬೇಕು. ಇಲ್ಲದಿದ್ದರೆ ಆ ಕೋಣವನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ.
ಮತ್ತೊಂದು ಹೊಸ ತಂತ್ರಜ್ಞಾನ ಫೋಟೋ ಫಿನಿಶಿಂಗ್ ಕಂಬಳದಲ್ಲಿ ಅಳವಡಿಸಲಾಗಿದೆ. ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ನೀಡಲಿದೆ. ಐಕಳಬಾವ ಕಂಬಳದಲ್ಲಿ ಹೊಸ ತಂತ್ರಜ್ಞಾನ ಪ್ರಯೋಗವಾಗಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ಕಂಬಳದಲ್ಲಿ ಬಳಸಲಾಗುತ್ತದೆ. ಹೊಸ ತಂತ್ರಜ್ಞಾನ ಬಳಕೆ ಆದ ನಂತರವಾದರೂ ಕಂಬಳ ನಿಗದಿತ ಸಮಯಕ್ಕೆ ಮುಕ್ತಾಯಗೊಳ್ಳುತ್ತಾ ಕಾದು ನೋಡಬೇಕಿದೆ.












Click it and Unblock the Notifications