ಮಂಗಳೂರು ಜೈಲಿಗೆ ಭೇಟಿ ನೀಡಿದ ಪರಮೇಶ್ವರ
ಮಂಗಳೂರು, ನವೆಂಬರ್ 08 : ಇಬ್ಬರು ಕೈದಿಗಳ ಹತ್ಯೆ ನಡೆದ ಮಂಗಳೂರಿನ ಜೈಲಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಭಾನುವಾರ ಭೇಟಿ ನೀಡಿದರು. 'ಕೊಣಾಜೆಯಲ್ಲಿ ನೂತನ ಜೈಲಿನ ಕಟ್ಟಡ ನಿರ್ಮಾಣ ಮಾಡಲು 40 ಎಕರೆ ಜಾಗವನ್ನು ಗುರುತಿಸಲಾಗಿದೆ' ಎಂದು ಹೇಳಿದರು.
ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪರಮೇಶ್ವರ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಜೈಲಿಗೆ ತೆರಳಿದ ಪರಮೇಶ್ವರ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕೈದಿಗಳ ಜೊತೆ ಮಾತುಕತೆ ನಡೆಸಿ ಜೈಲಿನಲ್ಲಿನ ಊಟ ಹೇಗಿದೆ? ಎಂದು ಪರಿಶೀಲನೆ ನಡೆಸಿದರು. [ಮಂಗಳೂರು ಜೈಲಿನಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ]

ನಂತರ ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಜೈಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಜೈಲಿನಲ್ಲಿ ನಡೆದ ಇಬ್ಬರು ಕೈದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಹತ್ಯೆಯ ಬಗ್ಗೆ ತನಿಖೆ ನಡೆಯುತ್ತಿದೆ' ಎಂದರು. [ಮಂಗಳೂರು ಜೈಲಿನಲ್ಲಿ ಹತ್ಯೆಯಾದವರು ಯಾರು?]
'ಜೈಲಿನ ಕಟ್ಟಡ ಬಹಳ ಪುರಾತನವಾದದ್ದು. ಈಗ ಜೈಲಿನಲ್ಲಿರುವ ವ್ಯವಸ್ಥೆಗಳು ಇಂದಿನ ಆಧುನಿಕ ದಿನಗಳಿಗೆ ತಕ್ಕಂತೆ ಇಲ್ಲ. ಜೈಲನ್ನು ಸ್ಥಳಾಂತರ ಮಾಡಲಾಗುತ್ತದೆ. ಕೊಣಾಜೆ ಬಳಿ 40 ಎಕರೆ ಜಾಗ ಗುರುತಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ' ಎಂದು ಪರಮೇಶ್ವರ ಹೇಳಿದರು.

ಭದ್ರತೆಗೆ ನಿಯೋಜನೆ : 'ಜೈಲಿನ ಭದ್ರತೆಗಾಗಿ 20 ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಎಸ್‌ಆರ್‌ಪಿಎಫ್)ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಮೊಬೈಲ್ ಜಾಮರ್ ಮತ್ತು ಸಿಸಿಟಿವಿಯನ್ನು ಜೈಲಿನಲ್ಲಿ ತಕ್ಷಣ ಆಳವಡಿಸಲಾಗುತ್ತದೆ' ಎಂದು ಪರಮೇಶ್ವರ ತಿಳಿಸಿದರು.


Click it and Unblock the Notifications
