ಮಂಗಳೂರಿನಲ್ಲಿ ಮತಾಂತರದ ಸಂಚಿಗೆ ನಾಲ್ವರ ಸಾವು; ನೂರ್ ಜಹಾನ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಡಿಸೆಂಬರ್ 11: ಕರಾವಳಿಯಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದ್ದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಾಲ್ವರ ಸಾವಿಗೆ ಮತಾಂತರ ಯತ್ನವೇ ನೇರ ಕಾರಣ ಅನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸುಂದರ ಕುಟುಂಬದಲ್ಲಿ ಮತಾಂತರದ ಆಮಿಷವೊಡ್ಡಿ ಸುಂಟರಗಾಳಿ ಎಬ್ಬಿಸಿ, ನಾಲ್ವರ ಸಾವಿಗೆ ಕಾರಣವಾದ ಮಹಿಳೆಯನ್ನು ಇದೀಗ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಾರ್ಗನ್ಸ್ ಗೇಟ್‌ನಲ್ಲಿ ಡಿಸೆಂಬರ್ 8ರಂದು ನಡೆದ ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಮಹತ್ತರ ಟ್ವಿಸ್ಟ್ ಸಿಕ್ಕಿದೆ. ಈ ಕುಟುಂಬದ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಎಂದು ಪಾಂಡೇಶ್ವರ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ನಾಗೇಶ್ ಶೇರಿಗುಪ್ಪಿ(30), ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಮಾರ್ಗನ್ಸ್ ಗೇಟ್‌ನ ಬಾಡಿಗೆ ಮನೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಆತ್ಮಹತ್ಯೆಗೂ ಮುನ್ನ ಮೃತ ನಾಗೇಶ್ ಡೆತ್‌ನೋಟ್ ಬರೆದಿಟ್ಟಿದ್ದರು. ಈ ಘಟನೆಗೆ ನೂರ್ ಜಹಾನ್ ಎಂಬ ಮಹಿಳೆ ಕಾರಣ ಎಂದು ಡೆತ್‌ನೋಟ್ ಬರೆದಿದ್ದು, ಈ ಬಗ್ಗೆ ನೂರ್ ಜಹಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೂರ್ ಜಹಾನ್ ಮೃತ ವಿಜಯಲಕ್ಷ್ಮಿಯನ್ನು ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿರುವುದು ಬಹಿರಂಗವಾಗಿದೆ. ಇದೇ ವಿಚಾರಕ್ಕೆ ನಾಗೇಶ್ ಮತ್ತು ವಿಜಯಲಕ್ಷ್ಮೀ ನಡುವೆ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ.

ಮಾರ್ಗನ್ಸ್ ಗೇಟ್‌ನ ಬಾಡಿಗೆ ಮನೆಗೆ ಬರುವ ಮೊದಲು ನಾಗೇಶ್ ಕುಟುಂಬ ನೂರ್ ಜಹಾನ್ ಇದ್ದ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಪ್ರತಿನಿತ್ಯ ಕುಡಿದು ಬಂದು ಪತಿ ನಾಗೇಶ್ ಜಗಳ ಮಾಡುತ್ತಿದ್ದ. ಈ ಸಂದರ್ಭ ಮದುವೆ ಬ್ರೋಕರ್ ಆಗಿರುವ ನೂರ್ ಜಹಾನ್ ಗಂಡ- ಹೆಂಡತಿ ನಡುವಿನ ಜಗಳವನ್ನು ಎನ್‌ಕ್ಯಾಶ್ ಮಾಡಿಕೊಂಡಿದ್ದಳು.
ಪತಿ ನಾಗೇಶ್‌ಗೆ ಡೈವೋರ್ಸ್ ಕೊಡುವಂತೆ ವಿಜಯಲಕ್ಷ್ಮಿಗೆ ಹೇಳಿದ್ದಳು. ಆ ಬಳಿಕ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿಕೊಡುವುದಾಗಿಯೂ ಹೇಳಿದ್ದಳು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗುವಂತೆ ಕಂಡೀಷನ್ ಹಾಕಿದ್ದ ನೂರ್ ಜಹಾನ್, ವಿಜಯಲಕ್ಷ್ಮಿ ಫೋಟೋ ಬಳಸಿ ಮುಸ್ಲಿಂ ಹುಡುಗನ ಹುಡುಕಾಟ ನಡೆಸಿದ್ದಳು. ಇದೇ ವಿಚಾರದಲ್ಲಿ ನಾಗೇಶ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆ ನಡೆದು ಮಕ್ಕಳು ಮತ್ತು ಪತ್ನಿ ವಿಜಯಲಕ್ಷ್ಮಿ ಕೊಂದು ನಾಗೇಶ್ ನೇಣಿಗೆ ಶರಣಾಗಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಾಗೇಶ್ ಕೃತ್ಯ ಎಸಗುವುದಕ್ಕೂ ಮುನ್ನ ಪಾಂಡೇಶ್ವರ ಪೊಲೀಸ್ ಠಾಣಾ ಅಧಿಕಾರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ. ಆ ಬಳಿಕ ಪೊಲೀಸರು ಮನೆಗೆ ಬಂದು ನೋಡಿದಾಗ ನಾಲ್ವರು ಹೆಣವಾಗಿರುವುದು ಬೆಳಕಿಗೆ ಬಂದಿದೆ. ಪತ್ನಿ ವಿಜಯಲಕ್ಷ್ಮಿಯನ್ನು ನಾಗೇಶ್ ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದೇನೆ. ಬಳಿಕ ಮಗಳು ಸಪ್ನಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರೆ, ಮಗ ಸಮರ್ಥ್‌ನನ್ನು ಮೂಗು ಮತ್ತು ಬಾಯಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೋಸ್ಟ್‌ಮಾರ್ಟಂನಲ್ಲಿ ತಿಳಿದುಬಂದಿದೆ.

ನಾಲ್ವರ ಸಾವಿಗೆ ಮತಾಂತರವೇ ಕಾರಣ ಅನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗುತ್ತಿದ್ದಂತೆಯೇ, ಹಿಂದೂ ಸಂಘಟನೆಗಳು ಕೆರಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ""ಮತಾಂತರ ಯತ್ನದಿಂದ ಅಮಾಯಕ ನಾಲ್ವರ ಸಾವಾಗಿದೆ. ಮತಾಂತರದ ವಿರುದ್ಧ ಹೋರಾಟ ಮಾಡುತ್ತಿದ್ದಂತೆಯೇ ಮತಾಂತರ ಜಾಲ ನಾಲ್ವರನ್ನು ಬಲಿ ಪಡೆದಿದೆ. ಸರ್ಕಾರ ಮುಂದಿನ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದು ಆದ್ಯಾದೇಶವನ್ನು ಹೊರಡಿಸಬೇಕೆಂದು,'' ಆಗ್ರಹಿಸಿದ್ದಾರೆ.
ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಹಿಳೆ ನೂರ್ ಜಹಾನ್‌ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತಾಂತರ ಪಿಡುಗಿಗೆ ಒಂದು ಕುಟುಂಬವೇ ದುರಂತ ಅಂತ್ಯ ಕಂಡಿದೆ.












Click it and Unblock the Notifications