ಸಾಮಾಜಿಕ ತಾಣಗಳಲ್ಲಿ ಸುಳ್ಳು ಸಂದೇಶ ರವಾನೆ: ಇಬ್ಬರು ವ್ಯಕ್ತಿಗಳ ಬಂಧನ
ಮಂಗಳೂರು ಜೂನ್ 01: ಮಂಗಳೂರು ನಗರದಲ್ಲಿ ಚರ್ಚ್ ದಾಳಿಯಾಗಿದೆ. ಪೊಲೀಸರೊಂದಿಗೆ ಸೇರಿ ಚರ್ಚ್ ಮೇಲೆ ದಾಳಿ ನಡೆಸಿ ದ್ವಂಸಗೊಳಿಸಿದ್ದಾರೆ ಎಂದು ಸುಳ್ಳು ಸಂದೇಶಗಳನ್ನು ಸಾಮಾಜಿಕ ಜಾಲತಾಣ ಹಾಗು ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸುಳ್ಳು ಸಂದೇಶ ರವಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರೂ ಅರೋಪಿಗಳು ಈ ಚರ್ಚ್ ದಾಳಿ ಸಂದೇಶ ಹರಿಬಿಟ್ಟಿದ್ದರು.
ಸುಳ್ಳು ಸಂದೇಶದ ಬೆನ್ನು ಹತ್ತಿದ್ದ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದ, ಅರಳಿಕೊಪ್ಪ ಗ್ರಾಮದ ಗುಡ್ಡಿಕೆರೆ ನಿವಾಸಿಗಳಾದ ಸುನಿಲ್ ವೇಗಸ್ (34), ಸಚಿತ್ ಪಿ.ಪಿ. (23) ಎಂಬುವವರನ್ನು ಬಂಧಿಸಿದ್ದಾರೆ.

ಆರೋಪಿಗಳು ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿಯಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಸುಳ್ಳುಸಂದೇಶಗಳನ್ನು ಹರಿ ಬಿಟ್ಟಿದ್ದರು .
ಈ ಹಿನ್ನೆಲೆಯಲ್ಲಿ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಗಳೂರು ಸೆಂಟ್ರಲ್ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications