ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಸಾಗಾಟಗಾರನ ಬಂಧನ
ಮಂಗಳೂರು, ಫೆಬ್ರವರಿ 17: ಮಂಗಳೂರಿನ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳು ಮಹತ್ವದ ಕಾರ್ಯಚರಣೆ ನಡೆಸಿ ಭಾರಿ ಪ್ರಮಾಣದ ವಿದೇಶಿ ಕರೆನ್ಸಿಗಳ ಅಕ್ರಮ ಸಾಗಾಟ ಯತ್ನವನ್ನು ವಿಫಲಗೊಳಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಸಾಗಿಸಲು ಯತ್ನಿಸುತ್ತಿದ್ದ 25.82 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಡಿ.ಆರ್.ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಕೇರಳದ ಕಾಸರಗೋಡು ಮೂಲದ ನಿವಾಸಿಯೊಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರು ವಿಮಾನದ ಮೂಲಕ ಭಾರೀ ವಿದೇಶಿ ಕರೆನ್ಸಿಗಳ ಸ್ಮಗ್ಲಿಂಗ್ ನಡೆಯುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದರು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

ಇದೇ ವೇಳೆ ಮಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ದುಬೈ ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕೇರಳ ಕಾಸರಗೋಡು ಮೂಲದ ಸಿರಾಜುದ್ದಿನ್ ಪಲ್ಲಿಕೆ ಎಂಬವರ ವರ್ತನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಡಿ.ಆರ್.ಐ ಅಧಿಕಾರಿಗಳು ಅವರನ್ನು ತನಿಖೆಗೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಿರಾಜುದ್ದಿನ್ ಪಲ್ಲಿಕೆ ಅವರ ಸಾಕ್ಸ್ ಹಾಗೂ ಬ್ಯಾಗ್ ನಲ್ಲಿ ಅಡಗಿಸಿ ಇಡಲಾಗಿದ್ದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಸಿರಾಜುದ್ದೀನ್ ಅವರಿಂದ ಅಮೆರಿಕಾ ಡಾಲರ್, ಸ್ವಿಸ್ ಫ್ರೆಂಕ್, ಯೂರೋಸ್, ಕುವೈಟ್ ದಿನಾರ್ ಸೇರಿದಂತೆ ಒಟ್ಟು 25.82 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿಯನ್ನು ಡಿ.ಅರ್.ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಾಜುದ್ದೀನ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.












Click it and Unblock the Notifications