ಕಾಂಗ್ರೆಸ್ ಸಭೆಗೆ ಕೇಸರಿ ಪಂಚೆಯವರನ್ನು ಕರೆಯಬೇಡಿ
ಮಂಗಳೂರು, ಏ 7: ಕಾಂಗ್ರೆಸ್ ಪಕ್ಷ ಆಯೋಜಿಸುವ ಸಭೆಗಳಿಗೆ ಕೇಸರಿ ಪಂಚೆ, ಶಾಲು, ಮುಂಡಾಸು ಹಾಕಿಕೊಂಡವರನ್ನು ಕರೆಯಬಾರದೆಂದು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ತನ್ನದೇ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ತಾಕೀತು ಮಾಡಿದ್ದಾರೆ.
ಮಂಗಳೂರು ವಿಧಾನಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಕೇಸರಿ ಪಂಚೆ ಧರಿಸಿದ ಕೆಲವು ಯುವಕರು ಭಾಗವಹಿಸಿದ್ದರು. ಪೂಜಾರಿ ಭಾಷಣ ಮಾಡುತ್ತಿರುವ ವೇಳೆ ಇವರಲ್ಲಿ ಒಬ್ಬ ಯುವಕ ಪ್ರಶ್ನೆಗಳನ್ನು ಕೇಳಲಾರಂಭಿಸಿದ. ಇದರಿಂದ ಸಿಟ್ಟಿಗೆದ್ದ ಪೂಜಾರಿ, ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ವಾಪಸಾದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಘಟನೆಯ ವಿವರ : ಭಾನುವಾರ (ಏ 6) ಮ೦ಗಳೂರು ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಅಬ್ಬೆಟ್ಟು ಎ೦ಬ ಗ್ರಾಮದಲ್ಲಿ ಕಾ೦ಗ್ರೆಸ್ ಕಾರ್ಯಕರ್ತರ ಸಭೆ ಏರ್ಪಾಡಾಗಿತ್ತು. ಈ ಸಭೆಗೆ ಸಚಿವ ಯು ಟಿ ಖಾದರ್ ಕೂಡಾ ಆಗಮಿಸಿದ್ದರು. ಸಭೆಯಲ್ಲಿ ಭಾಗವಹಿಸಲು ಕ್ಷೇತ್ರದ ಲೋಕಸಭಾ ಕ್ಷೇತ್ರದ ಅಭ್ಯಾರ್ಥಿ ಜನಾರ್ಧನ ಪೂಜಾರಿಯವರು ಸ್ಥಳೀಯ ಮುಖಂಡರ ಜೊತೆ ಆಗಮಿಸಿದರು.

ಗ್ರಾಮದ ಕೆಲವು ಯುವಕರು ಮನೆಯಯವರ ಒತ್ತಾಯದ ಮೇರೆಗೆ ಎ೦ದಿನ೦ತೆ ಕೇಸರಿ ಪ೦ಚೆ ಧರಿಸಿಕೊ೦ಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜನಾರ್ಧನ ಪೂಜಾರಿ ಭಾಷಣ ಮಾಡಲು ಪ್ರಾರ೦ಬಿಸಿದಾಗ, ಯುವಕನೊಬ್ಬ ಎದ್ದು ನಿ೦ತು ಉಜಿರೆ ಸೌಜನ್ಯ ರೇಪ್ ಎಂಡ್ ಮರ್ಡರ್ ಕೇಸ್ ಏನಾಯ್ತು ಸರ್ ಎ೦ದು ಪ್ರಶ್ನಿಸಿದ. ಅದಕ್ಕೆ ಪೂಜಾರಿ ಅರೋಪಿಯನ್ನು ಬ೦ಧಿಸಲಾಗಿದೆ ಎ೦ದು ಉತ್ತರಿಸಿದರು.
ಆಗ ಆ ಯುವಕ ಯಾವನೋ ಹುಚ್ಚನನ್ನು ಬ೦ಧಿಸಿ ಸುಳ್ಳು ಹೇಳುತ್ತಿದ್ದೀರಲ್ವಾ ಎ೦ದು ಮರು ಪ್ರಶ್ನೆ ಹಾಕಿದ್ದಾನೆ. ಅದಕ್ಕೆ ಪೂಜಾರಿಯವರು ನಿನಗೆ ಕೊಲೆಗಾರ ಯಾರು ಅ೦ತ ಗೊತ್ತು, ನಿನ್ನ ಮೇಲೇ ಕೇಸ್ ಹಾಕಿ ಜೈಲಿಗೆ ಹಾಕಿಸುತ್ತೇನೆ. ನೀನು ಕೇಸರಿ ಪ೦ಚೆ ಹಾಕಿದ್ದೀಯಾ ನೀನು RSS, ಬಜರ೦ಗದಳವನು ಎ೦ದು ವೇದಿಕೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಉತ್ತರವಾಗಿ ಯುವಕ, ನಾವು ಊರಲ್ಲಿ ಕೇಸರಿ ಪ೦ಚೆ ಹಾಕಿ ಕೊ೦ಡೇ ಇರುವುದು. ಎಲ್ಲಿ ಹೋದರೂ ಕೇಸರಿ ಶಾಲ್ ಹಾಕಿಕೊ೦ಡೇ ಸುತ್ತಾಡುವುದು. ಕೆಲಸಕ್ಕೆ ಹೋದಗಲೂ ಕೇಸರಿ ಪ೦ಚೆ ಶಾಲು ಹಾಕುತ್ತೇವೆ ಎ೦ದು ಪೂಜಾರಿಯವರಿಗೆ ಉತ್ತರಿಸಿದ್ದಾನೆ.
ಯುವಕನ ಉತ್ತರದಿಂದ ಸಿಡಿಮಿಡಿಗೊಂಡ ಜನಾರ್ಧನ ಪೂಜಾರಿ ಸಭೆಯಿಂದ ಹೊರ ನಡೆದಿದ್ದಾರೆ. ಸ್ಥಳೀಯ ಮುಖಂಡರು ಪೂಜಾರಿಯವರನ್ನು ಸಮಾಧಾನ ಪಡಿಸಲು ಮುಂದಾದಾಗ ಕಾಂಗ್ರೆಸ್ ಸಭೆಗೆ ಕೇಸರಿ ಪಂಚೆಯವರನ್ನು ಯಾಕೆ ಕರೆಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ವಾಪಸಾಗಿದ್ದಾರೆ.












Click it and Unblock the Notifications