ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಕುಸಿತ
ಮಂಗಳೂರು, ಜೂನ್ 06: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯದಲ್ಲಿ ಕಳೆದ ಸಾಲಿನ ಆದಾಯಕ್ಕಿಂತ ಈ ಬಾರಿ ಸುಮಾರು 3.83 ಕೋಟಿ ರೂಪಾಯಿ ಆದಾಯ ಕುಸಿದಿರುವುದಾಗಿ ತಿಳಿದುಬಂದಿದೆ.
ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಅತ್ಯಂತ ಅಧಿಕ ಆದಾಯ ತರುವ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯವೂ ಒಂದು. ಮುಜರಾಯಿ ಇಲಾಖೆ ಅಧೀನದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸಾಲಿನ ವಾರ್ಷಿಕ ಆದಾಯ 92.09 ಕೋಟಿ ರೂಪಾಯಿ ಆಗಿದ್ದು. ಕಳೆದ ವರ್ಷದ ಆದಾಯ ಸುಮಾರು 95.92 ಕೋಟಿ ದಾಖಲಾಗಿತ್ತು.

ಕಳೆದ ಸಾಲಿನ ಆದಾಯಕ್ಕೆ ಹೋಲಿಸಿದರೆ, ಈ ಬಾರಿ ದೇವಸ್ಥಾನದ ಆದಾಯದಲ್ಲಿ ಸುಮಾರು 3.83 ಕೋಟಿ ಕುಸಿತ ಕಂಡಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಠೇವಣಿ ಇರಿಸಿದ ಹಣಕ್ಕೆ ಬಡ್ಡಿ ಸಿಗದೆ ಇರುವುದು ಹಾಗೂ ಕಳೆದ ಮಳೆಗಾಲದಲ್ಲಿ ಹೆದ್ದಾರಿ, ರಸ್ತೆ ಸಂಚಾರ ಅಡಚಣೆ, ಪ್ರಾಕೃತಿಕ ವಿಕೋಪಗಳಿಂದ ಸಂಚಾರ ವ್ಯತ್ಯಯಗೊಂಡು ಯಾತ್ರಾರ್ಥಿಗಳ ಕೊರತೆ ಆಗಿದ್ದು ಆದಾಯ ಕುಸಿತಕ್ಕೆ ಮುಖ್ಯ ಕಾರಣಗಳು ಎಂದು ಅಂದಾಜಿಸಲಾಗಿದೆ.












Click it and Unblock the Notifications