Vasanth Bangera: ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿಧನ
ಮಂಗಳೂರು, ಮೇ 08: ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ( (79) ವಿಧಿವಶರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರ ಅವರು ಧೀರ್ಘ ಕಾಲದ ಅನಾರೋಗ್ಯದಿಂದ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗೆ ಕೆ.ವಸಂತ ಬಂಗೇರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ನಾಳೆ ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆಯಿದ್ದು, ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆ.ವಸಂತ ಬಂಗೇರ ಅವರ ರಾಜಕೀಯ ಜೀವನ
1946ರ ಜನವರಿ 15ರಂದು ಬೆಳ್ತಂಗಡಿಯಲ್ಲಿ ಜನಿಸಿದ ಕೆ.ವಸಂತ ಬಂಗೇರ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚುನಾವಣೆಗೆ ನಿಂತು ಗೆಲವು ಸಾಧಿಸಿ ದಾಖಲೆ ಬರೆದಿದ್ದಾರೆ. ಬೆಳ್ತಂಗಡಿಯಲ್ಲಿ ಐದು ಬಾರಿಯ ಶಾಸಕರಾಗಿದ್ದು, ಜನಪರ ನಾಯಕ ಎಂದೇ ಜನಪ್ರಿಯತೆ ಪಡೆದಿದ್ದರು.
1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತ ವಸಂತ ಬಂಗೇರ ಸೋಲು ಕಂಡರು. ಬಳಿಕ 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ನಿಂತು ಮತ್ತೆ ಗೆಲುವು ಕಂಡರು. 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು.
ಜೆಡಿಎಸ್‌ನಿಂದ ಸ್ಪರ್ಧಿಸಿದ ವಂಸತ ಬಂಗೇರ ಅವರನ್ನು ಅವರ ಸಹೋದರ ಪ್ರಭಾಕರ ಬಂಗೇರ ಸೋಲಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿ ಮತ್ತೆ ಈ ಕ್ಷೇತ್ರದಲ್ಲಿ ಶಾಸಕರಾದರು. 2013ರಲ್ಲಿ ಮತ್ತೆ ವಸಂತ ಬಂಗೇರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.












Click it and Unblock the Notifications