Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು
ಮಂಗಳೂರು, ನವೆಂಬರ್ 14: ಬಹು ವಿವಾದಕ್ಕೊಳಗಾದ ನಗರದ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಈ ವಿಚಾರವನ್ನು ದಕ್ಷಿಣ ಸಂಸದ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಕಟೀಲ್," ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ, ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ನಾಗರಿಕರ ಪರವಾಗಿ ಧನ್ಯವಾದಗಳು" ಎಂದು ಹೇಳಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ವಿವಾದ: ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ
ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶಗಳನ್ನು ಪೂರೈಸಲಾಗಿದೆ ಎಂದು ಟ್ವೀಟ್‌ನಲ್ಲಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಟೋಲ್ ವಿರೋಧಿ ಸಮಿತಿ ಇತ್ತೀಚೆಗೆ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿತ್ತು. ಆ ಬಳಿಕವೂ ಟೋಲ್ ತೆರವು ಮಾಡಿರದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಅನಿರ್ದಿಷ್ಟವಾಧಿ ಹಗಲು ರಾತ್ರಿ ಧರಣಿ ನಡೆಸುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ 2015ರಲ್ಲಿ ಈ ವಿವಾದಿತ ಟೋಲ್‌ಗೇಟ್ ತೆರೆಯಲಾಗಿದೆ. ಇದು ನಿಯಮ ಬಾಹಿರವಾಗಿದೆ ಎಂಬ ಆರೋಪ ಸಾಕಷ್ಟು ದಿನಗಳಿಂದ ಕೇಳಿಬರುತ್ತಿತ್ತು. ಕೇವಲ 17 ಕಿಮೀ ಅಂತರದಲ್ಲಿ ಎರಡು ಟೋಲ್‌ಗೇಟ್ ಇದ್ದಿದ್ದರಿಂದ ಟೋಲ್ ವಿರೋಧಿ ಸಮಿತಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಅನ್ವಯ ಹೆದ್ದಾರಿಯಲ್ಲಿ ಎರಡು ಟೋಲ್‌ಗಳ ಮಧ್ಯೆ 60 ಕಿಮೀ ಅಂತರ ಇರಬೇಕು ಎಂಬ ನಿಯಮವಿದೆ. ಆದ್ದರಿಂದ ಸುರತ್ಕಲ್ ಟೋಲ್ ತೆರವು ಮಾಡಬೇಕೆಂಬುದು ದಕ್ಷಿಣ ಕನ್ನಡ ಜಿಲ್ಲೆಯ ಜನರ ಆಗ್ರಹವಾಗಿತ್ತು.

60 ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ನಿಯಮವುದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್‌ಗೇಟ್‌ಗಳಿದ್ದವು. ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ ಗೇಟ್, ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್ ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೃಹತ್ ಪ್ರತಿಭಟನೆ ನಡೆದಿತ್ತು; ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ತೆರವುಗೊಳಿಸಲು ಪ್ರತಿಭಟನೆ ನಡೆಸಿದ್ದರು. ಅಂದು ಪ್ರತಿಭಟನಾಕಾರರು ಕೋಪದಲ್ಲಿ ಟೋಲ್ ವಸ್ತುಗಳನ್ನೆಲ್ಲಾ ಒಡೆದಿದ್ದರು. ಪೊಲೀಸರು ಸುಮಾರು 360ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದರು.












Click it and Unblock the Notifications