ಸುರತ್ಕಲ್ ಟೋಲ್ ಗೇಟ್ ವಿವಾದ: ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ
ಮಂಗಳೂರು, ಅಕ್ಟೋಬರ್31: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ಸದ್ಯಕ್ಕೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ರಾತ್ರಿ ಹಗಲು ಧರಣಿ ಇಂದು(ಅಕ್ಟೋಬರ್31) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಟೋಲ್ ಗೇಟ್‌ಅನ್ನು ನವೆಂಬರ್ 7ರೊಳಗಾಗಿ ಸ್ಥಗಿತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಇಂತಹ ಅನೇಕ ದಿನಾಂಕಗಳ ನಿಗದಿಯನ್ನು ನಾವು ನೋಡಿದ್ದೇವೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಅಕ್ಟೋಬರ್ 18 ರಂದು ಟೋಲ್ ಗೇಟ್ ಕಿತ್ತೆಸೆಯಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ತಡೆದಿದ್ದರು. ಇದೀಗ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದು, ಟೋಲ್ ಗೇಟ್ ತೆರವಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇದ್ದರೆ, ಉಪವಾಸ ಸತ್ಯಾಗ್ರಹ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, "ಬಿಜೆಪಿಯ ಶಾಸಕರು ಮತ್ತು ಸಂಸದರಿಗೆ ಟೋಲ್ ಗೇಟ್ ತೆರವು ಮಾಡುವ ಇಚ್ಛಾಶಕ್ತಿ ಇಲ್ಲ. ನಾವು ಟೋಲ್ ಗೇಟ್ ವಿರುದ್ಧ ನಮ್ಮ ಎರಡನೇ ಹಂತದ ಪ್ರತಿಭಟನೆಯಲ್ಲಿದ್ದೇವೆ. ಇನ್ನು ಮುಂದಿನ ಹಂತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

ಇನ್ನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು. "ಅಕ್ರಮ ಟೋಲ್ ಸಂಗ್ರಹವು ಸರ್ಕಾರದ 40% ಕಮಿಷನ್ ನೀತಿಯ ಭಾಗವಾಗಿದೆ. ಟೋಲ್ ಗೇಟ್ ತೆರವು ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುವವರಿಗೆ ನಾವು ಬೆಂಬಲ ನೀಡುತ್ತೇವೆ," ಎಂದಿದ್ದಾರೆ. ಈ ಅನಿರ್ದಿಷ್ಟ ಧರಣಿಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯರು, ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಪಕ್ಷ, ಸಂಘಟನೆಯ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಏನಿದು ಟೋಲ್ ಗೇಟ್ ವಿವಾದ..?
60 ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್‌ಗೇಟ್‌ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ ಗೇಟ್, ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್ ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications