ಬೆಳ್ತಂಗಡಿ : ಅಳಿಯನ ಕೊಂದ ಮಾವ ಜೈಲು ಸೇರಿದ
ಮಂಗಳೂರು, ಜೂ. 17 : ಕುಡಿದ ಮತ್ತಿನಲ್ಲಿ ಅಳಿಯನನ್ನು ಹಾರೆಯಿಂದ ಕಡಿದುಕೊಂದ ಮಾವನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜಮೀನಿನ ಪಾಲಿನ ವಿಚಾರದಲ್ಲಿ ಮಾವ-ಅಳಿಯನ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯಗೊಂಡಿತ್ತು.
ಕೊಲೆ ಮಾಡಿದ ಆರೋಪಿಯನ್ನು ಕುಟ್ಟನ್ ಅಲಿಯಾಸ್ ನಾರಾಯಣ (70) ಎಂದು ಗುರುತಿಸಲಾಗಿದೆ. ಕೊಲೆಯಾದ ಅಳಿಯನನ್ನು ಕಡಬ ಸಮೀಪದ ಕೋಡಿಂಬಾಡಿಯ ಸುರೇಶ್ (50) ಎಂದು ಗುರುತಿಸಲಾಗಿದ್ದು, ಶನಿವಾರ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಸುರೇಶ್ ಕೊಲೆ ನಡೆದಿತ್ತು.

ಶನಿವಾರ ರಾತ್ರಿ ಮಾವ-ಅಳಿಯ ಇಬ್ಬರು ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದಾರೆ. ನಂತರ ಜಮೀನಿನ ಹಂಚಿಕೆ ವಿಚಾರದಲ್ಲಿ ಜಗಳ ನಡೆದು ಮಾವ ಅಳಿಯನನ್ನು ಹಾರೆಯಿಂದ ಕಡಿದು ಕೊಲೆ ಮಾಡಿದ್ದ. ಆರೋಪಿ ನಾರಾಯಣ ತನ್ನ ಎರಡನೇ ಹೆಂಡಂತಿ ಮಗಳು ಶಿಬಾಳನ್ನು ಸುರೇಶ್ ಗೆ ಕೊಟ್ಟು ಮದುವೆ ಮಾಡಿದ್ದ. ಸುರೇಶನಿಗೆ ಇದು ಎರಡನೇ ಮದುವೆಯಾಗಿದ್ದು ಮೊದಲ ಪತ್ನಿಗೆ 2 ಮತ್ತು ಶಿಬಾಳಿಗೆ ಮೂವರು ಮಕ್ಕಳಿದ್ದರು.
ಘಟನೆಯ ವಿವರ : ಶನಿವಾರ ರಾತ್ರಿ ಮಾವ-ಅಳಿಯ ಇಬ್ಬರು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಜಮೀನಿನ ಪಾಲಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಅಳಿಯ ಮಾವನಿಗೆ ತನ್ನ ಕಾಲಿನಿಂದ ಒದ್ದು ಹಲ್ಲೆ ಮಾಡಲು ಮುಂದಾಗಿದ್ದಾನೆ.
ಈ ಸಂದರ್ಭದಲ್ಲಿ ಮಾವ ನಾರಾಯಣ ಅಲ್ಲಿಯೇ ಇದ್ದ ಒನಕೆಯಿಂದ ಅಳಿಯನ ತಲೆಗೆ ಬಲವಾಗಿ ಹಲ್ಲೆ ನಡೆಸಿದ. ಇದರಿಂದಾಗಿ ಸುರೇಶ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಹಾರೆಯಲ್ಲಿ ಸುರೇಶನ ತಲೆಯನ್ನು ಕಡಿದು ಹಾಕಿದ್ದ. ನಂತರ ಮನೆಯಿಂದ ಪರಾರಿಯಾಗಿ ಮನೆಯ ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ.
ಭಾನುವಾರ ವಾಹನವೊಂದರಲ್ಲಿ ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಗುರುವಾಯನಕೆರೆ ತಲುಪಿದ್ದ ನಾರಾಯಣ, ಅಲ್ಲಿಂದ ಕಾರ್ಕಳದ ಈದುವಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಕೇರಳಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಆತನನ್ನು ಪೊಲೀಸರು ಗುರುವಾಯನಕೆರೆ ಸಮೀಪದ ಪೊಟ್ಟುಕೆರೆ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ ಬಂಧಿಸಿದ್ದರು.


Click it and Unblock the Notifications
