ಬಪ್ಪನಾಡು ಕ್ಷೇತ್ರದ ಹೆಸರಿನ ಮುಂದೆ ಹಜರತ್: ಸರಿಪಡಿಸಿದ ಗೂಗಲ್
ಮಂಗಳೂರು, ಏಪ್ರಿಲ್ 4: ಉಡುಪಿ ಜಿಲ್ಲೆ ಕಾಪುವಿನ ಸುಗ್ಗಿ ಮಾರಿಪೂಜೆಯಲ್ಲಿ ಆರಂಭವಾದ, ಹಿಂದೂ ಜಾತ್ರೆಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹೇರುವ ಪರ್ವ, ರಾಜ್ಯದ ಇತರ ದೇವಾಲಗಳಿಗೂ ಹಬ್ಬಿತ್ತು. ಅದರಂತೇ, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕೂಡಾ ನಿಷೇಧ ಹೇರುವಂತೆ ಒತ್ತಡ ಬಂದಿತ್ತು.
ಬಪ್ಪನಾಡು ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಅದರಲ್ಲಿ ಶಂಕರಪುರ ಮಲ್ಲಿಗೆ ಪ್ರಮುಖವಾದದ್ದು.
ಅಲ್ಲಿನ ಜಾತ್ರಾ ಕಾರ್ಯಕ್ರಮ ಈಗ ಮುಗಿದ ನಂತರ ಕಿಡಿಗೇಡಿಗಳು ಗೂಗಲ್ ಮ್ಯಾಪ್ ನಲ್ಲಿ ದುಷ್ಕೃತ್ಯ ಎಸಗಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ದೇವಾಲಯದ ಆಡಳಿತ ಮಂಡಳಿ ತಕ್ಷಣ ಇದಕ್ಕೆ ಸ್ಪಂದಿಸಿದೆ. ಗೂಗಲ್ ಮ್ಯಾಪ್ ನಲ್ಲಿ ಹಿಂದಿನಂತೆಯೇ ದೇವಸ್ಥಾನದ ಹೆಸರನ್ನು ಬದಲಾಯಿಸಲಾಗಿದೆ.

ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಎಂದಿದ್ದನ್ನು ಕಿಡಿಗೇಡಿಗಳು ಹಜ್ರತ್ ಬಪ್ಪಬ್ಯಾರಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಎಂದು ಗೂಗಲ್ ಮ್ಯಾಪ್ ನಲ್ಲಿ ಎಡಿಟ್ ಮಾಡಿದ್ದರು. ಮುಕ್ತ ವೇದಿಕೆಯಾಗಿದ್ದರೂ, ಯಾರೂ ಬೇಕಾದರೂ ಮ್ಯಾಪ್ ನಲ್ಲಿ ಹೆಸರು ಬದಲಾಯಿಸಲು ಅವಕಾಶವಿರುವುದಿಲ್ಲ. ಆದರೂ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಹೆಸರನ್ನು ಬದಲಾಯಿಸಿ ಚಾಲಾಕಿತನ ತೋರಿದ್ದಾರೆ.
ಈ ವಿದ್ಯಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆಲ್ಲಲ್ಲೇ, ದೇವಳದ ಆಡಳಿತ ಮಂಡಳಿಯ ಸದಸ್ಯರು, ಕ್ಷೇತ್ರದ ಭಕ್ತರು ಸೇರಿ, ಮಂಗಳೂರು ಕಮಿಷನರ್, ಮೂಲ್ಕಿ ಪೊಲೀಸ್ ಠಾಣೆ ಮತ್ತು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶನಿವಾರ (ಏಪ್ರಿಲ್ 2) ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಭಕ್ತರ ಮತ್ತು ಕ್ಷೇತ್ರದ ಆಡಳಿತ ಮಂಡಳಿಯ ಸತತ ಫಾಲೋಪ್ ಮತ್ತು ಗೂಗಲ್ ರಿವ್ಯೂ ಬಳಿಕ, ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ, ಎಂದು ಗೂಗಲ್ ಮ್ಯಾಪ್ ನಲ್ಲಿ ಬದಲಾವಣೆಯಾಗಿದೆ. ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರಿಗೆ ಸಾಧ್ಯವಿರುವುದರಿಂದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.












Click it and Unblock the Notifications