ಐವನ್ ಡಿಸೋಜಾಗೆ ಕಾಂಗ್ರೆಸ್ ಟಿಕೆಟ್, ಕ್ರೈಸ್ತರಿಂದ ಒತ್ತಾಯ
ಮಂಗಳೂರು, ಏಪ್ರಿಲ್ 05: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೆತ್ರದ ಆಭ್ಯರ್ಥಿಯ ಆಯ್ಕೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ , ನನ್ನ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ಕೊಟ್ಟಲ್ಲಿ ಕ್ಷೇತ್ರ ಬಿಟ್ಟುಕೊಡುವುದಾಗಿ ಈ ಹಿಂದೆ ಶಾಸಕ ಆಭಯ ಚಂದ್ರ ಜೈನ್ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಮಿಥುನ್ ರೈ ಹಾಗೂ ವಿಧಾನ ಸಭೆಯ ಮುಖ್ಯ ಸಚೇತಕ ಐವನ್ ಡಿ ಸೋಜಾ ಪೈಪೋಟಿಯಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು.
ಬಿಜೆಪಿಗೆ 2019ರದ್ದು ಕೊನೆಯ ಚುನಾವಣೆ: ಐವನ್ ಡಿಸೋಜಾ
ಆದರೆ ಇತ್ತಿಚೆಗೆ ನಡೆದ ಬೆಳವಣಿಗೆಯಲ್ಲಿ ಅಭಯಚಂದ್ರ ಜೈನ್ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಬೆಳವಣಿಗೆಯಿಂದ ಯುವ ನಾಯಕರಾದ ಮಿಥುನ್ ರೈ ಹಾಗೂ ಐವನ್ ಡಿಸೋಜಾ ಅವರುಗಳಿಗೆ ದಿಗಿಲು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ಮಿಥುನ್ ರೈ ತೆರೆಮರೆಗೆ ಸರಿದರೆ ಇನ್ನೊಂದಡೆ ಐವನ್ ಡಿಸೋಜಾ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಸುತಿದ್ದಾರೆ.
ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಕ್ರೈಸ್ತ ಮುದಾಯದವರ ಸಂಖ್ಯೆ ಹೆಚ್ಚಿರುವ ಕಾರಣ ಐವನ್ ಡಿಸೋಜಾ ಟಿಕೆಟ್ ಗಾಗಿ ಕ್ರೈಸ್ತ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಮಖಂಡರು ಸೇರಿದಂತೆ ಮಂಗಳೂರಿನ ಉದ್ಯಮಿ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖ ಮುಂಖಂಡರೊಬ್ಬರು ಟಿಕೆಟ್ ಗಾಗಿ ಐವನ್ ಪರ ಲಾಭಿ ಆರಂಭಿಸಿದ್ದಾರೆ ಎಂದು ಹೇಳಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮುಲ್ಕಿ ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿ ಕ್ರೈಸ್ತ ಧರ್ಮಗುರುಗಳು, ಮುಖಂಡರು ಸೇರಿ ಕಾಂಗ್ರೆಸ್ ಆಭ್ಯರ್ಥಿಯಾಗಿ ಐವನ್ ಅವರನ್ನೇ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಬಾರೀ ಒತ್ತಡ ಹೇರಲು ಅರಂಭಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ಇದೀಗ ತನ್ನ ಶಕ್ತಿ ಪ್ರದರ್ಶನಕ್ಕೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಕ್ರೈಸ್ತ ಸಮುದಾಯ ಸಿದ್ಧತೆ ನಡೆಸಿದೆ. ಇದೇ ಬರುವ ಎಪ್ರಿಲ್ 10 ರಂದು ಐವನ್ ಡಿಸೋಜಾ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ರಸ್ತೆಗಿಳಿಯಲು ಕ್ರೈಸ್ತ ಸಮುದಾಯ ನಿರ್ದರಿಸಿದೆ ಎಂದು ಹೇಳಲಾಗಿದೆ.
ಟಿಕೆಟ್‌ಗಾಗಿ ಐವನ್ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ. ಈ ಪ್ರತಿಭಟನೆ ಮೂಡಬಿದಿರೆ ಅಥವಾ ಮಂಗಳೂರಿನ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಕಾಂಗ್ರೆಸ್ ಮೂಲಗಳೇ ತಿಳಿಸಿವೆ. ಈ ಹಿಂದೆ ಮಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದ ಐವನ್ ಡಿಸೋಜಾ ಅವರಿಗೆ ಶಾಸಕ ಜೆ.ಆರ್.ಲೋಬೊ ತಡೆಯೊಡ್ಡಿದ ಹಿನ್ನಲೆಯಲ್ಲಿ ಇದೀಗ ಮುಲ್ಕಿ-ಮೂಡಬಿದಿರೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಐವನ್ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐವನ್ ಹಾಗು ಅಭಯಚಂದ್ರ ಅವರ ನಡುವೆ ಮನಸ್ತಾಪ ತೀವ್ರಗೊಳ್ಳುವ ಲಕ್ಷಣ ಗೋಚರಿಸುತ್ತಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !