BREAKING: ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ
ಸಕ್ಕರೆ ನಾಡು ಮಂಡ್ಯದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಣೇಶ ವಿಸರ್ಜನೆಯ ಅಂಗವಾಗಿ ಮೂರ್ತಿಯನ್ನು ಮೆರವಣಿಗೆಗೆ ತರಲಾಗಿತ್ತು. ಈ ವೇಳೆ ಹೆಚ್ಚಿನ ಜನ ಕೂಡ ಸೇರಿದ್ದರು.
ಇದ್ದಕ್ಕಿದ್ದಂತೆ ಕೆಲವರು ದುಷ್ಕರ್ಮಿಗಳು ಮೆರವಣಿಗೆ ನಡೆಸುತ್ತಿದ್ದರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದು ಸಿಕ್ಕ ಸಿಕ್ಕಲ್ಲಿ ಬೆಂಕಿ ಕೂಡ ಹಚ್ಚಿದ್ದಾರೆ. ಅಲ್ಲಿದ್ದ ಕೆಲ ವಾಹನಗಳಿಗೂ ಕೂಡ ಬೆಂಕಿ ಹಚ್ಚಿದ್ದು, ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.

ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಕೈಯಲ್ಲಿ ಕತ್ತಿ, ತಲ್ವಾರ್ ಕೂಡ ಹಿಡಿದು ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಲಾಠಿ ಚಾರ್ಜ್ ಮೂಲಕ ದುಷ್ಕರ್ಮಿಗಳನ್ನು ಅಲ್ಲಿಂದ ಚದುರಿಸಿ, ಅವರು ತಂದಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಇಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ನಾಗಮಂಗಲದಲ್ಲಿ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಇನ್ನು ಬೇರೆ ಧರ್ಮದವರು ಈ ರೀತಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ ಎಂದು ಗಣೇಶೋತ್ಸವದ ಯುವಕರು ಆರೋಪಿಸಿದ್ದು, ಗಣಪತಿ ಮೂರ್ತಿಯನ್ನು ನೇರವಾಗಿ ನಾಗಮಂಗಲ ಪೊಲೀಸ್ ಠಾಣೆಯ ಎದುರು ಕರೆದೊಯ್ದು, ಧಿಕ್ಕಾರ ಕೂಡ ಕೂಗಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.@BasanagoudaBJP @RAshokaBJP @MandyaPolice @DgpKarnataka pic.twitter.com/6brRlpahmP
— Praveen hugar (@Praveen22951937) September 11, 2024
ಈ ಬಗ್ಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಇತಿಹಾಸದಲ್ಲೇ ಇಂತಹ ಘಟನೆ ಈ ಹಿಂದೆ ನಡೆದಿರಲಿಲ್ಲ. ಸದ್ಯಕ್ಕೆ ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ ಇಲ್ಲಿ ಪೊಲೀಸರ ಕರ್ತವ್ಯಲೋಪ ಇದ್ದರೆ, ಅವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇನೆ. ನಾಳೆ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಕೂಡ ಘಟನೆ ಬಗ್ಗೆ ಮಾತನಾಡಿದ್ದು, ಇದು ರಾಜ್ಯದ ಸರ್ಕಾರದ ಲೋಪ. ಘಟನೆ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಇಂತಹ ವಾತಾವರಣ ನಿರ್ಮಾಣವಾಗಲು ರಾಜ್ಯ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. ಇಂದು ರಾತ್ರಿ ಶಾಂತವಾಗಿದ್ದ ಮಂಡ್ಯದಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದೆ.
ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಖಂಡಿಸಿದ್ದು, ಮಂಡ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಅನ್ಯಕೋಮಿನವರು ಮತ್ತೊಮ್ಮೆ ತಮ್ಮ ದುರ್ಬುದ್ದಿ, ದುಷ್ಟತನ ತೋರಿದ್ದಾರೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಕಲ್ಲು ತೂರಿರುವುದು ಇವರ ರೋಗಗ್ರಸ್ಥ ಮನಃಸ್ಥಿತಿ ತೋರಿಸುತ್ತದೆ ಎಂದಿದ್ದಾರೆ.
ಗಣೇಶನ ಪ್ರಸಾದ ತಯಾರು ಮಾಡಲು ನಿಯಮಾವಳಿ ರೂಪಿಸಿದ ಸರ್ಕಾರ ಯಾರಿಗೂ ತೊಂದರೆ ಕೊಡದೆ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರುವವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತದೆ? ಕಲ್ಲು ತೂರಿದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಿ ಶಿಕ್ಷಿಸಬೇಕು ಹಾಗೂ ಕಲ್ಲುತೂರಾಟವನ್ನು ಪ್ರಚೋದಿಸಿದ ಪಟ್ಟಭದ್ರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications