Heart attack: ಕಿರುತೆರೆ ನಟ ಹೃದಯಾಘಾತದಿಂದ ನಿಧನ, ಇಂದು ತವರು ಜಿಲ್ಲೆ ಮಂಡ್ಯದಲ್ಲಿ ಅಂತ್ಯಕ್ರಿಯೆ
ಮಂಡ್ಯ, ಆಗಸ್ಟ್, 18: ಇತ್ತೀಚೆಗಷ್ಟೇ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯ ಕಿರುತೆರೆ ನಟ ಪವನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.
ಅವರಿಗೆ ತೀವ್ರ ಹೃದಯಾಘಾತ ಹಿನ್ನೆಲೆ ಆಗಸ್ಟ್ 16ರಂದು ಪವನ್ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದವರಾದ ಪವನ್ ಮಹಾರಾಷ್ಟ್ರದಲ್ಲಿ ವಾಸವಾಗಿದ್ದು, ಅವರು ಹಿಂದಿ, ತಮಿಳು ಧಾರವಾಹಿಯಲ್ಲಿ ನಟಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಬೆಳ್ಳಿ ಪರದೆಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು ಪವನ್ ಎನ್ನಲಾಗಿದೆ.

ಇದೀಗ ಹೃದಯಾಘತದಿಂದ ಪವನ್ ಅವರು ನಿಧನರಾಗಿದ್ದು, ಅವರ ಮೃತದೇಹವನ್ನು ಹುಟ್ಟೂರು ಮಂಡ್ಯ ಜಿಲ್ಲೆಯ ಹರಿಹರಪುರ ಗ್ರಾಮಕ್ಕೆ ತರಲಾಗಿದ್ದು, ಶುಕ್ರವಾರ (ಆಗಸ್ಟ್ 18) ಮಧ್ಯಾಹ್ನದ ವೇಳೆಗೆ ಕೆ.ಆರ್.ಪೇಟೆಯ ಹರಿಹರಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ ಕುಟುಂಬದವರು ಹಾಗೂ ಆಪ್ತರು ಭಾಗಿಯಾಗಲಿದ್ದಾರೆ. ಇನ್ನು ಪವನ್ ಅವರು ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ಇನ್ನು ಇತ್ತೀಚೆಗಷ್ಟೇ ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ನಡೆದಿತ್ತು.
ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಈಕೆ ಸಿಎಂಎಸ್ ಅನಾಥಾಲಯದಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಳು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದರು.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮೃತಳ ತಾಯಿ ದೂರು ಕೊಟ್ಟಿದ್ದು, ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ ಎನ್ನಲಾಗಿತ್ತು.
ಮೃತ ವಿದ್ಯಾರ್ಥಿನಿ ಫಿಲಿಶ್(15) ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ನಿಧನರಾದ ಬಳಿಕ ಕ್ರೈಸ್ತ ಮಿಷನರಿಯೊಂದು ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಬಿಟ್ಟಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದರು.
ಬಾಲಕಿ ಆರೋಗ್ಯವಾಗಿದ್ದು ಧಿಡೀರ್ ಕುಸಿದು ಬಿದ್ದು ಹೃದಯಾಘಾತವಾಗಿರುವುದು ನಮಗೆಲ್ಲರಿಗೂ ಆಘಾತವಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ. ಮೃತ ಬಾಲಕಿಯ ಶವವನ್ನು ಪಟ್ಟಣದ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತತರಿಸಲಾಗಿತ್ತು.












Click it and Unblock the Notifications